ರಾಣೆಬೆನ್ನೂರು: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಕೊರತೆ ಇದ್ದು, ಸಾರ್ವಜನಿಕರು ಲಸಿಕೆಗಾಗಿ ಪರದಾಡುವಂತಾಗಿದೆ.
ಸರ್ಕಾರ ರಾಜ್ಯಾದ್ಯಂತ ಕೊರೊನಾ ಲಸಿಕೆಯನ್ನು ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ಸರಬರಾಜು ಮಾಡುತ್ತಿದೆ. ಆದರೆ ನಗರಕ್ಕೆ ಅಲ್ಪ ಪ್ರಮಾಣದ ಲಸಿಕೆ ಸರಬರಾಜಾಗುತ್ತಿದೆ. ಸರ್ಕಾರ 18 ವರ್ಷಗಳ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ಹಾಕಿಕೊಳ್ಳಲು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಲಸಿಕೆಗಾಗಿ ಜನರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಲಸಿಕೆ ಮಾತ್ರ ಸಿಗುತ್ತಿಲ್ಲ ಅನ್ನೋದು ಸಾರ್ವಜನಿಕರ ದೂರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನವೊಂದಕ್ಕೆ 100 ಲಸಿಕೆಗಳನ್ನು ಮಾತ್ರ ಹಾಕಲಾಗುತ್ತದೆ. ನೂರಕ್ಕಿಂತ ಹೆಚ್ಚು ಜನರು ಬಂದರೆ ಕೊರೊನಾ ಲಸಿಕೆ ಸಿಗುವುದಿಲ್ಲ ಎಂದು ಸ್ವತಃ ಅಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ. ಸಾರ್ವಜನಿಕ ಆಸ್ಪತ್ರೆಯೆದುರು ಲಸಿಕೆಗಾಗಿ ಸಾವಿರಾರು ಜನರು ಕ್ಯೂ ನಿಲ್ಲುತ್ತಾರೆ. ಇದ್ದ ನೂರು ಲಸಿಕೆಗಳನ್ನು ಹಾಕಿ ಕಳಿಸುಲಾಗುತ್ತದೆ ಎಂದು ಅಲ್ಲಿನ ನರ್ಸ್ ಒಬ್ಬರು ಹೇಳಿದರು.
ಶಿಕ್ಷಕಿಯೊಬ್ಬರು ಕಳೆದ ನಾಲ್ಕು ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರಿಗೆ ನಿನ್ನೆ ದಿನಾಂಕ ನಿಗದಿಯಾಗಿದ್ದು, ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಲಸಿಕೆ ಇಲ್ಲವೆಂದು ಸಿಬ್ಬಂದಿ ಹೇಳಿದ್ದಾಗಿ ಅವರು ಬೇಸರಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ: ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ