ಹಾವೇರಿ: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣವಿಲ್ಲ. ಎಲ್ಲವೂ ಸರಿಯಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಗಲು ರಾತ್ರಿ ಎನ್ನದೆ ಪಕ್ಷ ಬಲಪಡಿಸಲು ಹೋರಾಟ ಮಾಡುತ್ತಿದ್ದಾರೆ. ಬಣ ವ್ಯತ್ಯಾಸ ಎನ್ನುವ ವಿಚಾರಗಳು ಬಿಜೆಪಿಯವರ ಸೃಷ್ಟಿಯಷ್ಟೇ. ಲೋಕಸಭೆ ಕ್ಷೇತ್ರಗಳಲ್ಲಿ ಮೈತ್ರಿ ಕುರಿತಂತೆ ಹೊಂದಾಣಿಕೆ ವಿಷಯವನ್ನು ಯಾವ ನಾಯಕರು ಚರ್ಚಿಸಬಾರದು ಎಂದು ಡಿಕೆಶಿ ತಿಳಿಸಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದು ಸಚಿವ ಹೆಚ್.ಕೆ.ಪಾಟೀಲ್ ಪ್ರಶ್ನಿಸಿದರು.
ಹಾವೇರಿಯಲ್ಲಿ ಲೋಕಸಭೆ ಚುನಾವಣೆ ಪೂರ್ವಸಿದ್ಧತಾ ಸಭೆಗೂ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಅಧಿಕಾರಕ್ಕೆ ಬಂದು 30 ತಿಂಗಳ ನಂತರ (ಎರಡೂ ವರ್ಷ) ಸಚಿವರು ಬದಲಾಗಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿರುವುದನ್ನೇ ಅಶೋಕ್ ಪಟ್ಟಣ ಹೇಳಿದ್ದಾರೆ. ಆದರೆ ರಾಜ್ಯದಲ್ಲಿ ಆ ಪರಿಸ್ಥಿತಿ ಇಲ್ಲ. ಈಗ ಎಲ್ಲವೂ ಸರಿಯಾಗಿದೆ. ಎರಡು ವರ್ಷದ ನಂತರ ಆಗಬಹುದು ಎಂದಿದ್ದಾರೆ. ಇದಕ್ಕೆ ಪುಷ್ಟಿ ನೀಡುವ ಯಾವುದೇ ಅಂಶವನ್ನು ಅಶೋಕ್ ಪಟ್ಟಣ ಹೇಳಿಲ್ಲ" ಎಂದರು.
ಬರಗಾಲದಲ್ಲಿ ಸಚಿವರು ಕಾರು ಖರೀದಿ ಮಾಡಿರುವ ವಿಚಾರ ಕುರಿತಂತೆ ಮಾತನಾಡಿದ ಅವರು, "ಈ ಕಾರುಗಳನ್ನು ಬರಗಾಲಕ್ಕಿಂತ ಮೊದಲೇ ಅರ್ಡರ್ ಮಾಡಿರಬಹುದು. ಅವು ಈಗ ಬಂದಿವೆ. ಬಹಳ ಮೊದಲು ಬುಕ್ ಮಾಡಲಾಗಿತ್ತು. ಇದು ಬರಗಾಲದಲ್ಲಿ ಆರ್ಡರ್ ಮಾಡಿ ತೆಗೆದುಕೊಂಡ ಕಾರು ಅಲ್ಲ" ಎಂದು ಸ್ಪಷ್ಟಪಡಿಸಿದರು.
"ಲೋಕಸಭೆ ಚುನಾವಣೆ ಹಿನ್ನೆಲೆ ಹಾವೇರಿಯಲ್ಲಿ ಮಹತ್ವವಾದ ಸಭೆ ನಡೆಸುತ್ತಿದ್ದೇವೆ. ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅತ್ಯಂತ ಬಲಿಷ್ಠವಾಗಿದೆ. ನಾವು 6 ಕ್ಷೇತ್ರಗಳಲ್ಲಿ ಗೆದ್ದಿರುವುದಷ್ಟೇ ಅಲ್ಲ, ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದೇವೆ. ಜನರಿಗೆ ಅದರ ಪ್ರಯೋಜನಗಳ ಕುರಿತಂತೆ ಜಾಗೃತಿ ಮೂಡಿಸಿದ್ದೇವೆ. ನಮ್ಮ ಕಾರ್ಯಗಳು ಜನರ ವಿಶ್ವಾಸ ಗಳಿಸಿಕೊಳ್ಳುವಲ್ಲಿ ಸಾಧ್ಯವಾಗಿವೆ" ಎಂದು ಹೇಳಿದರು.
"ಸರ್ವಾನುಮತದ ಒಗ್ಗಟ್ಟಿನ ಮಂತ್ರ ನಮ್ಮನ್ನು ಗೆಲ್ಲಿಸುತ್ತದೆ. ಸಿಎಂ ಸಿದ್ದರಾಮಯ್ಯ, ಡಿಕೆಶಿ ನಾಯಕತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ 20ಕ್ಕೂ ಅಧಿಕ ಸಂಸದರು ದೆಹಲಿ ಸಂಸತ್‌ಗೆ ಆಯ್ಕೆಯಾಗಲಿದ್ದಾರೆ. ಜನರು ಬಿಜೆಪಿ ಆಡಳಿತದಿಂದ ಪೂರ್ಣ ಬೇಸತ್ತಿದ್ದಾರೆ. ರಾಜ್ಯವನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಮಹದಾಯಿ, ಕಾವೇರಿ ಮತ್ತು ಕೃಷ್ಣಾ ವಿಚಾರದಲ್ಲಿ ಚುನಾವಣೆ ಬಂದಾಗ ಬಿಜೆಪಿ ನಾಯಕರು ಸುಳ್ಳು ಹೇಳಿ ಹೋಗಿಬಿಡುತ್ತಾರೆ" ಎಂದು ಆರೋಪಿಸಿದರು.
ಇದನ್ನೂ ಓದಿ: ಬಿಜೆಪಿಗರು ಬಸ್ ನಿಲ್ದಾಣದಲ್ಲಿ ಜೋತಿಷ್ಯ ಹೇಳಲಿ: ಸಚಿವ ಮಧು ಬಂಗಾರಪ್ಪ
ಕಾಂಗ್ರೆಸ್ ಗೆಲ್ಲಿಸಲು ಪಣತೊಟ್ಟ ಸಚಿವರುಗಳು: ಬಳಿಕ ಮಾತನಾಡಿದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, "ಹಾವೇರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಸಾಕಷ್ಟು ಅಕಾಂಕ್ಷಿಗಳಿದ್ದಾರೆ. ಹಾವೇರಿಯಲ್ಲಿ ಮುಂದಿನ ಚುನಾವಣೆ ನಿಮಿತ್ತ ನಡೆಯುತ್ತಿರುವ ಮೊದಲ ಸಭೆ ಇದಾಗಿದ್ದು, ಇನ್ನು ಮುಂದೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತವೆ. ಕಳೆದ ಮೂರು ಬಾರಿ ಕಾಂಗ್ರೆಸ್ ಸೋತಿದೆ. ಅದಕ್ಕಾಗಿಯೇ ನಮ್ಮನ್ನು ಹಾವೇರಿ ಲೋಕಸಭಾ ಕ್ಷೇತ್ರದ ವೀಕ್ಷಕರನ್ನಾಗಿ ಮಾಡಿದ್ದಾರೆ. ಹಾವೇರಿಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ದೃಷ್ಟಿಯಲ್ಲಿ ಎಲ್ಲರೂ ಕೆಲಸ ಮಾಡಬೇಕಿದೆ" ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, "ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಒಮ್ಮತದಿಂದ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಹಾವೇರಿ ಜಿಲ್ಲಾ ಲೋಕಸಭೆ ಚುನಾವಣಾ ಪೂರ್ವಸಿದ್ದತಾ ಸಭೆ ಕರೆಯಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾವೇರಿ ಗದಗ ಲೋಕಸಭಾ ವೀಕ್ಷಕರನ್ನಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ನೇಮಕಮಾಡಿದ್ದಾರೆ" ಎಂದು ತಿಳಿಸಿದರು.
"ವಿಧಾನಸಭೆ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ. ಬಿಜೆಪಿ ಕಳೆದ 10 ವರ್ಷಗಳಿಂದ ಸುಳ್ಳು ಹೇಳಿಕೊಂಡು ಬಂದಿದೆ. ಕಪ್ಪು ಹಣ ತಂದು ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ರೂಪಾಯಿ ಹಾಕುವುದಾಗಿ ತಿಳಿಸಿ 15 ರೂಪಾಯಿ ಸಹ ಹಾಕಲಿಲ್ಲ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ 2 ಲಕ್ಷ ಉದ್ಯೋಗ ಕೂಡ ಸೃಷ್ಟಿಸಿಲ್ಲ. ರೈತರ ಆದಾಯ ದ್ವಿಗುಣ ಮಾಡುವುದಾಗಿ ತಿಳಿಸಿದ್ದು ಮಾತ್ರ, ಅದನ್ನೂ ಜಾರಿ ಮಾಡಿಲ್ಲ" ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಾವು ವೆಸ್ಟ್ಎಂಡ್ ಹೋಟೆಲ್ನಲ್ಲಿ ಕೂತು ಸರ್ಕಾರ ನಡೆಸುತ್ತಿಲ್ಲ: ಹೆಚ್ಡಿಕೆಗೆ ಸಿಎಂ ಗುದ್ದು