ಹಾವೇರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023ರ ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧಿಸುವ ಕುರಿತ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿ-ಸವಣೂರು ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ತಿಳಿಸಿದರು. ಶಿಗ್ಗಾಂವಿ-ಸವಣೂರು ಕ್ಷೇತ್ರದ ಜನ ನನ್ನನ್ನ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ನನ್ನ ಜತೆ ಪ್ರೀತಿ, ವಿಶ್ವಾಸದಿಂದ ನಡೆದುಕೊಂಡಿದ್ದಾರೆ. ಈ ಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಫರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿ 2ನೇ ಬಾರಿಗೆ ಯೋಗಿ ಆದಿತ್ಯನಾಥ್ ಸಿಎಂ ಆಗಿದ್ದಾರೆ. ಕಾರ್ಯಕ್ರಮಕ್ಕೆ ಬಹಳ ಜನರು ಸೇರಿದ್ದರು. ಪಂಚ ರಾಜ್ಯ ಚುನಾವಣೆಗಳ ನಂತರ ಹೊಸ ರಾಜಕೀಯ ಸಂಚಲನ ಉಂಟಾಗಿದೆ. ಉತ್ತರಾಖಂಡ, ಮಣಿಪುರ, ಗೋವಾ ಸೇರಿದಂತೆ ನಮಗೆ ಹೆಚ್ಚು ಗೆಲುವಾಗಿದೆ. ಇದು 2024ರ ಲೋಕಸಭಾ ಚುನಾವಣೆಯ ದಿಕ್ಸೂಚಿ.
ರಾಜ್ಯದಲ್ಲಿ ಎಲ್ಲಿ ಹೋದರೂ ನಮಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. 2023ರಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಹಿಜಾಬ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸುಮಾರು 70 ವರ್ಷಗಳಿಂದ ಎಲ್ಲರೂ ಶಾಲೆಗಳಿಗೆ ಸಮವಸ್ತ್ರ ಧರಿಸಿಯೇ ಬಂದಿದ್ದಾರೆ. ಹೈಕೋರ್ಟ್ ಆದೇಶ ಕೊಟ್ಟಿದೆ. ಎಲ್ಲರೂ ಚಾಚೂ ತಪ್ಪದೆ ಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದು ಸಿಎಂ ಮನವಿ ಮಾಡಿದರು.
ದೇವಸ್ಥಾನಗಳ ಮುಂದೆ ಅನ್ಯಕೋಮಿನವರ ಅಂಗಡಿ ಹಾಕುವ ಕುರಿತಂತೆ ಮಾತನಾಡಿದ ಅವರು, ಧರ್ಮ ದತ್ತಿ ಕಾನೂನಿನಲ್ಲಿ ಬೋರ್ಡ್ ಹಾಕಲು ಅವಕಾಶವಿದೆ. ಧರ್ಮ ದತ್ತಿ ಕಾನೂನಿನಲ್ಲಿ ಕೆಲವು ಪ್ರದೇಶಗಳನ್ನ ಗುತ್ತಿಗೆ ನೀಡಿರುತ್ತಾರೆ. ಅವರಿಗೆ ಬೋರ್ಡ್ ಹಾಕಲು ಅವಕಾಶವಿದೆ. ಎಲ್ಲರೂ ಒಂದೆಡೆ ಕುಳಿತು ಸೌಹಾರ್ದತೆ, ಶಾಂತಿಯಿಂದ ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಬಹುದು ಎಂದು ಸಿಎಂ ಸಲಹೆ ನೀಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಆ ವಿಚಾರದ ಬಗ್ಗೆ ನೀವು ಅವರನ್ನೇ ಕೇಳಬೇಕು. ಈಗಾಗಲೇ ಈ ಕುರಿತಂತೆ ಹೈಕೋರ್ಟ್ ಆದೇಶ ನೀಡಿದೆ. ಎಲ್ಲರೂ ಅದನ್ನ ಪಾಲಿಸಬೇಕು. ಪ್ರಚೋದನೆಕಾರಕ ಹೇಳಿಕೆ ನೀಡಬಾರದು ಎಂದರು.
ಇದನ್ನೂ ಓದಿ: ನಮ್ಮೆಲ್ಲ ಸ್ವಾಮೀಜಿಗಳ ಉದ್ದೇಶ ಒಂದೇ ಸಿದ್ದರಾಮಯ್ಯರನ್ನ ಸೋಲಿಸೋದು.. ಪ್ರಣವಾನಂದ ಸ್ವಾಮೀಜಿ