ಶಿಗ್ಗಾಂವಿ(ಹಾವೇರಿ) : ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ತವರು ಕ್ಷೇತ್ರದ ಶಿಗ್ಗಾಂವಿಯಲ್ಲಿ ಭಾವುರಾಗಿದ್ದಾರೆ. ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಸಿಎಂ, ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ, ನವಣಿ ಅಕ್ಕಿ ಅನ್ನ ಮಾಡಿ ಹಾಕಿದ್ದೀರಿ. ನಾನೇನು ಕೆಲಸ ಮಾಡಿದ್ರೂ ಆ ಋಣ ತೀರಿಸಲು ಆಗೋದಿಲ್ಲ ಅಂತಾ ಭಾವುಕರಾಗಿದ್ದಾರೆ.
ಯಾವುದೂ ಶಾಶ್ವತವಲ್ಲ, ಈ ಬದುಕೇ ಶಾಶ್ವತವಲ್ಲ. ನಾವು ಎಷ್ಟು ದಿನ ಇರ್ತೇವೆ ಅದೂ ಗೊತ್ತಿಲ್ಲ. ಸ್ಥಾನಮಾನಗಳು ಶಾಶ್ವತವಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ ನಿಂತಿದ್ದೇನೆ. ಕ್ಷೇತ್ರದ ಹೊರಗಡೆ ಇದ್ದಾಗ ನಾನು ಸಿಎಂ, ಗೃಹ ಸಚಿವ. ಕ್ಷೇತ್ರದ ಒಳಗಡೆ ಬಂದಾಗ ನಾನು ಬಸವರಾಜ ಬೊಮ್ಮಾಯಿ ಆಗಿ ಉಳಿಯುತ್ತೇನೆ. ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತ. ಅದರ ಹಿಂದಿರೋ ಪದನಾಮಗಳು ಶಾಶ್ವತವಲ್ಲ ಎಂದು ಹೇಳಿದ್ದಾರೆ.
ಶಾಶ್ವತವಾಗಿ ನಿಮ್ಮ ಪ್ರೀತಿ ವಿಶ್ವಾಸ ಉಳಿಸಿಕೊಂಡು ಹೋಗಬೇಕೆಂಬ ಆಸೆಯಿದೆ. ನಾನು ಭಾವನಾತ್ಮಕವಾಗಿ ಮಾತನಾಡಬಾರ್ದು ಅಂದ್ಕೊಂಡಿದ್ದೆ. ನಿಮ್ಮನ್ನೆಲ್ಲ ನೋಡಿದಾಗ ಭಾವನೆಗಳು ಬರುತ್ತವೆ. ಎಲ್ಲ ಸಮುದಾಯಗಳ ಭಾವನೆಗೆ ಸ್ಪಂದಿಸೋದು ಸೇರಿದಂತೆ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರಕ್ಕೆ ಸವಾಲುಗಳಿವೆ, ಅವುಗಳನ್ನ ಎದುರಿಸಿಕೊಂಡು ಹೋಗಬೇಕಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
'ಅಂಬೇಡ್ಕರ್, ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡ್ತೇವೆ'
ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು ಯಾವುದೋ ಒಂದು ರಾಜ್ಯ ಪಡೆದುಕೊಳ್ಳಲು ಅಲ್ಲ. ವಿಸ್ತರಣೆಗಾಗಿ ಹೋರಾಟ ಮಾಡಲಿಲ್ಲ. ತನ್ನ ರಾಜ್ಯದ ಜನರ ರಕ್ಷಣೆ ಮತ್ತು ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದಳು.
ಎಲ್ಲ ಸಮುದಾಯದವರನ್ನ ಸೇರಿಸಿಕೊಂಡು ಚೆನ್ನಮ್ಮ ರಾಜ್ಯವನ್ನ ಉಳಿಸೋ ಕೆಲಸ ಮಾಡಿದಳು. ಸಂಗೊಳ್ಳಿ ರಾಯಣ್ಣ ಸೆರೆಯಾದಾಗ ಕಿತ್ತೂರು ಚೆನ್ನಮ್ಮ ಕುಸಿದು ಹೋದಳು. ಅಲ್ಲಿಯವರೆಗೂ ಕಿತ್ತೂರು ಚೆನ್ನಮ್ಮ ಬ್ರಿಟಿಷರ ಯಾವುದಕ್ಕೂ ಕುಸಿದಿರಲಿಲ್ಲ ಎಂದು ಹೇಳಿದರು.
ಸಾಧಕರಿಗೆ ಸಾವು ಅಂತ್ಯವಲ್ಲ. ಕಿತ್ತೂರು ಚೆನ್ನಮ್ಮ ಅಂದು ಯುದ್ಧ ಮಾಡಿದ್ದನ್ನ ಇಂದು ನಾವು ನೆನಪಿಸಿಕೊಳ್ತಿದ್ದೇವೆ. ಈಗಾಗಲೇ ಅಂಬೇಡ್ಕರ ಮೂರ್ತಿ ಕೂಡ ತಯಾರಾಗಿದೆ. ಏಪ್ರೀಲ್ ಒಳಗಾಗಿ ಅಂಬೇಡ್ಕರ ಮೂರ್ತಿ ಪ್ರತಿಷ್ಠಾಪನೆ ಮಾಡ್ತೇವೆ. ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡ್ತೇವೆ ಎಂದರು.
'ಪಂಚಮಸಾಲಿ ಸಮಾಜಕ್ಕೆ 2ಎ ಬಗ್ಗೆ ಹೇಳಿದ್ದೇನೆ'
ಪಂಚಮಸಾಲಿ ಸಮಾಜಕ್ಕೆ 2ಎ ಕೊಡೋ ಬಗ್ಗೆ ಈಗಾಗಲೇ ಸಭೆಯಲ್ಲಿ ಹೇಳಿದ್ದೇನೆ. ಹಿಂದುಳಿದ ವರ್ಗದ ಆಯೋಗಕ್ಕೆ ಸಹಕಾರ ಕೊಡಿ. ಈ ನಾಡಿದ ಬಹುತೇಕ ಜನರಿಗಾಗಿ ಒಳ್ಳೆಯ ದಿನಗಳು, ನ್ಯಾಯ ಕೊಡಲು ನಿರ್ಣಯ ತೆಗೆದುಕೊಳ್ಳುತ್ತೇವೆ.
ನನಗೆ ಶಿಗ್ಗಾಂವಿ-ಸವಣೂರು ಏತ ನೀರಾವರಿ ಯೋಜನೆಯ ಕೆರೆ ತುಂಬಿಸೋ ಕೆಲಸ ಮಾಡಬೇಕು ಅಂತಾ ಇತ್ತು. ಅದು ಪೂರ್ಣವಾಗಿದೆ. ನೂರಕ್ಕಿಂತ ಹೆಚ್ಚು ಕೆರೆಗಳು ತುಂಬಿವೆ. ನಿಮ್ಮ ಬೆಂಬಲ, ಆಶೀರ್ವಾದಕ್ಕೆ ಶ್ರೇಯಸ್ಸು ತರೋ ಕೆಲಸ ಮಾಡ್ತೇನೆ ಎಂದಿದ್ದಾರೆ.
ಎಲ್ಲರೂ ಬಹಳ ಚೆನ್ನಾಗಿ ಮಾತನಾಡಿದ್ದೀರಿ. ನನಗೆ ಬಹಳ ಸಂತೋಷ ಆಗಿದೆ ಇವತ್ತು. ಸಮುದಾಯದ ಅಭಿವೃದ್ಧಿ ಬಗ್ಗೆ ಇಬ್ಬರು ಪರಮಪೂಜ್ಯರು ಹೇಳಿದ ವಿಚಾರಗಳನ್ನ ಶಿರಸಾವಹಿಸಿ ಮಾಡ್ತೇನೆ. ಇವತ್ತಿನಿಂದ ಕಿತ್ತೂರು ಚೆನ್ನಮ್ಮ ನಾವು ಮಾಡೋದನ್ನ ನೋಡ್ತಿದ್ದಾಳೆ ಅನ್ನೋ ಅರಿವಿನಿಂದ ಕೆಲಸ ಮಾಡೋಣ.
ಹರ ಜಾತ್ರೆ ಮತ್ತು ಕೂಡಲಸಂಗಮ ಸಂಕ್ರಮಣ ಕಾರ್ಯಕ್ರಮ ಎರಡಕ್ಕೂ ಕರೆದಿದ್ದಾರೆ. ಸಮಯ ನಿಗದಿ ಮಾಡಿಕೊಂಡು ಎರಡೂ ಕಡೆ ಬರೋ ಕೆಲಸವನ್ನ ಮಾಡ್ತೇನೆ. ಈ ಕ್ಷೇತ್ರದ ಅಭಿವೃದ್ಧಿಯಲ್ಲಿ ಯಾವುದೇ ಸಮುದಾಯ ಕಡೆಗಣಿಸದೆ ಎಲ್ಲರಿಗೂ ನ್ಯಾಯ ಕೊಡೋ ಕೆಲಸವನ್ನ ಮಾಡ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ ಮೂರನೇ ಅಲೆ ಆತಂಕವಿಲ್ಲ.. ಆದ್ರೆ, ಎಚ್ಚರಿಕೆ ಅಗತ್ಯ.. ಶಿಕ್ಷಣ ಸಚಿವ ಬಿ.ಸಿ.ನಾಗೇಶ್