ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಗ್ರಾಮ ದೇವತೆಯ ಶಕ್ತಿ ಬಹಳ ದೊಡ್ಡದು. 2007 ರಲ್ಲಿ ನಾನು ಇಲ್ಲಿಗೆ ಬಂದಾಗ ಚುನಾವಣೆಗೆ ನಿಲ್ಲುತ್ತೇನೆ ಎಂದು ಬಂದಿರಲಿಲ್ಲ. ಅವಳ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಹಾವೇರಿ ಜಿಲ್ಲೆ ಶಿಗ್ಗಾಂವಿಯ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. 16 ವರ್ಷಗಳಿಂದ ಈ ದೇವಿಯ ಜಾತ್ರೆಗೆ ಬರುತ್ತಿದ್ದೇನೆ. ಈ ದೇವಿ ಜಾತ್ರೆ ವಿಶಿಷ್ಟವಾದದ್ದು, ಈ ದೇವಿಯು ಅತ್ಯಂತ ಪ್ರಸನ್ನ ರೂಪಿ ಎಂದು ಸಿಎಂ ಬೊಮ್ಮಾಯಿ ಗುಣಗಾನ ಮಾಡಿದರು.
ಇಲ್ಲಿನ ರೈತರು ಪ್ರಾಮಾಣಿಕರು ಹಾಗೂ ಶ್ರಮಿಕರು: ನಿಮಗೆ ನಾನು ಸದಾ ಋಣಿಯಾಗಿದ್ದೇನೆ. ಉಸಿರು ಇರುವ ತನಕ ನಿಮ್ಮ ಸೇವೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಶಿಗ್ಗಾಂವಿಗೆ ಭವ್ಯವಾದ ಪರಂಪರೆಯಿದೆ. ಶಿಗ್ಗಾಂವಿ ಮಣ್ಣು ಫಲವತ್ತಾದ ಮಣ್ಣು. ಇಲ್ಲಿಯ ರೈತರು ಅತ್ಯಂತ ಶ್ರಮವಹಿಸಿ ದುಡಿಯುವವರು. ಅವರಿಗೆ ಸ್ವಲ್ಪ ಸಹಾಯ ಮಾಡಿದರೆ ಬಂಗಾರದ ಬೆಳೆ ಬೆಳೆಯುತ್ತಾರೆ. ಇಲ್ಲಿನ ಜನ ಅತ್ಯಂತ ದೈವಿ ಭಕ್ತರು, ಪ್ರಾಮಾಣಿಕರು ಎಂದರು. ಮಣ್ಣಿನ ಜೊತೆ ಇರುವವರು, ಜೊತೆಗೆ ಯಾರು ಮಣ್ಣಿನ ಕೆಲಸ ಮಾಡುತ್ತಾರೋ ಅವರು ಕಠಿಣ ಪರಿಶ್ರಮಿಗಳು ಹೌದು, ಪ್ರಾಮಾಣಿಕರು ಹೌದು ಎಂದು ಬಸವರಾಜ ಬೊಮ್ಮಾಯಿ ಹೊಗಳಿಕೆ ವ್ಯಕ್ತಪಡಿಸಿದರು.
ಶಿಗ್ಗಾಂವಿ ತಾಲೂಕಿನ ಅಭಿವೃದ್ದಿಗೆ 94 ಕೋಟಿ ರೂ ಅನುದಾನ ಬಂದಿದೆ. ಇದು ದೊಡ್ಡ ದಾಖಲೆಯಾಗಿದೆ. ಹಿಂದೆ ಕೇವಲ 10-12 ಕೋಟಿ ಬರುತ್ತಿತ್ತು. ಶಿಗ್ಗಾಂವಿ ತಾಲೂಕು ಒಂದಕ್ಕೆ 54 ಕೋಟಿ ರೂ. ಬೆಳೆ ವಿಮೆ ಬಂದಿದೆ. ಸುಮಾರು 20,927 ರೈತರಿಗೆ ಇದರಿಂದ ಅನುಕೂಲ ಆಗಿದೆ ಎಂದರು. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಯೋಜನೆ ಲಭಿಸಿದೆ. ರೈತರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ : ಭದ್ರಾ ಜಲಾಶಯದಿಂದ ತುಂಗಭದ್ರಾ ಡ್ಯಾಂಗೆ ನೀರು ಬಿಟ್ಟರೇ ಜೋಕೆ: ಸರ್ಕಾರಕ್ಕೆ ಎಚ್ಚರಿಸಲು ಹೋರಾಟಕ್ಕಿಳಿದ ದಾವಣಗೆರೆ ರೈತರು
ನಿಮ್ಮ ಮತಕ್ಕೆ ಕುಂದು ತರುವ ಕೆಲಸ ಮಾಡಿಲ್ಲ: ಶಿಗ್ಗಾಂವಿ ಜನರಿಗೆ ನಾನು ಚಿರಋಣಿಯಾಗಿದ್ದೇನೆ. ನಿಮ್ಮೆಲ್ಲರ ಆರ್ಶೀವಾದದಲ್ಲಿ ದೊಡ್ಡ ಶಕ್ತಿಯಿದೆ. ಶಿಗ್ಗಾಂವಿಯನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ಅವಕಾಶ ನನಗೆ ಸಿಕ್ಕಿದೆ. ನನ್ನ ಉಸಿರಿರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ. ಸಜ್ಜನರ ಸಮೂಹ ಎಲ್ಲಾದರೂ ಇದ್ದರೆ ಅದು ಶಿಗ್ಗಾಂವಿಯಲ್ಲಿ ಇದೆ. ಹಲವಾರು ಯೋಜನೆಯನ್ನು ರಾಜ್ಯದ ಮಹಿಳೆಯರಿಗಾಗಿ ಮಾಡಿದ್ದೇನೆ. ನಿಮ್ಮ ಮತಕ್ಕೆ ಕುಂದು ತರುವ ಕೆಲಸ ಮಾಡಿಲ್ಲ. ಗೌರವ ತರುವ ಕೆಲಸ ಮಾಡಿದ್ದೇನೆ. ಮುಂದೆಯೂ ಇದೇ ರೀತಿ ಅಭಿವೃದ್ಧಿ ಕೆಲಸವನ್ನು ಮಾಡುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ : ಮಧ್ಯಂತರ ವರದಿ ಬಂದ ಕೂಡಲೇ ಏಳನೇ ಪರಿಷ್ಕೃತ ವೇತನ ಜಾರಿ: ಸಿಎಂ ಬೊಮ್ಮಾಯಿ
ಇದೇ ವೇದಿಕೆಯಲ್ಲಿ 2007 ರಲ್ಲಿ ಎಲ್ಲರೂ ಆರ್ಶೀವಾದ ಮಾಡಿದ್ದರು. ನಾನು ಚುನಾವಣೆಗೆ ನಿಲ್ಲಬೇಕು ಅಂತಾ ಅಂದುಕೊಂಡಿಲ್ಲ. ಎಲ್ಲಾ ಗುರು ಹಿರಿಯರು ಬಲವಂತ ಮಾಡಿದರು. ದೇವರು ಆರ್ಶೀವಾದ ಮಾಡಿದ್ದರು. ಬರುವಂತಹ ದಿನಗಳಲ್ಲಿ ಶಿಗ್ಗಾಂವಿಗೆ ಭವ್ಯ ಭವಿಷ್ಯ ಇದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ : ಉಸಿರಿರುವ ತನಕ ನಿಮ್ಮ ಸೇವೆ ಮಾಡುವೆ: ಶಿಗ್ಗಾಂವಿ ಜನರಿಗೆ ಸಿಎಂ ಬೊಮ್ಮಾಯಿ ಭರವಸೆ