ಹಾವೇರಿ: ಜಿಲ್ಲೆಯ ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆಗೆ ಅಧಿಕ ಪೂರೈಕೆ ಇರುವ ಕಾರಣ ಬೆಲೆ ಸಹ ಕಡಿಮೆಯಾಗಿದೆ ಎಂದು ಮೆಣಸಿನಕಾಯಿ ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಮೆಣಸಿನಕಾಯಿ ಮಾರುಕಟ್ಟೆಯ ಆವಕ ವಾರದಿಂದ ವಾರಕ್ಕೆ ಅಧಿಕವಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಮಾರುಕಟ್ಟೆಯಲ್ಲಿ 2 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು ಮಾರಾಟಕ್ಕೆ ಬರುತ್ತಿವೆ. ಬ್ಯಾಡಗಿ ಕಡ್ಡಿ,ಬ್ಯಾಡಗಿ ಡಬ್ಬಿ ಗುಂಟೂರು ಸೇರಿದಂತೆ ವಿವಿಧ ತಳಿಯ ಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತಿದೆ. ಎರಡು ಲಕ್ಷ 30 ಸಾವಿರ ಚೀಲದವರೆಗೆ ಆವಕವಾಗಿದೆ. ಗುರುವಾರ ಮತ್ತು ಸೋಮವಾರ ಮಾರುಕಟ್ಟೆಗೆ ಮೆಣಸಿನಕಾಯಿ ಬರುತ್ತಿದೆ. ಮೆಣಸಿನಕಾಯಿ ಮಾರುಕಟ್ಟೆಗೆ ಆಂಧ್ರಪ್ರದೇಶ,ರಾಯಚೂರು, ಕಲಬುರಗಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸುತ್ತಾರೆ.
ಇಲ್ಲಿ ಅಂತರಾಷ್ಟ್ರೀಯ ಮಟ್ಟದ ವರ್ತಕರು ಬಿಡ್ ಮಾಡುವ ಕಾರಣ ಅಧಿಕ ಬೆಲೆ ಸಿಗುವ ಕಾರಣ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಪ್ರಸ್ತುತ ಕೆಲರೋಗಗಳು ಬೆಳೆಗೆ ಬಾದಿಸಿದ್ದು ಬೆಳೆ ಬೆಳೆಯಲು ಖರ್ಚು ಮಾಡಿದ ಹಣದಂತೆ ದರ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಜನವರಿ ಫೆಬ್ರುವರಿಯಲ್ಲಿ ಇಳುವರಿ ಉತ್ತಮ ಇರುವ ಕಾರಣ ಬೆಲೆ ಕ್ವಿಂಟಲ್‌ಗೆ 40 ಸಾವಿರವಿದ್ದರೆ ಪ್ರಸ್ತುತ 30 ಸಾವಿರ ರೂಪಾಯಿ ಇದೆ. ಮೆಣಸಿನಕಾಯಿ ತಳಿ, ಬಣ್ಣ, ರುಚಿ ಮತ್ತು ವಾಸನೆ ಮೇಲೆ ದರ ನಿಗದಿ ಮಾಡಲಾಗುತ್ತದೆ.