ಹಾವೇರಿ: ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರರ ಒಗ್ಗಟ್ಟನ್ನು ಮುರಿದಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದರು.
ಜಿಲ್ಲೆಯ ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರಿಗೆ ಬೆಂಬಲವಾಗಿ ಇರುತ್ತೇನೆ ಎಂದು ಅವರನ್ನು ಎರಡು ತಂಡಗಳನ್ನಾಗಿ ಮಾಡಿದ್ದಾರೆ. ಅವರು ಸಾರಿಗೆ ನೌಕರರ ಪರವಾಗಿ ಇರುತ್ತೇನೆ ಎಂದು ಹೋರಾಟ ಮಾಡೋದು ಬಹಳ ವಿಪರ್ಯಾಸ. ಕೋಡಿಹಳ್ಳಿ ಚಂದ್ರಶೇಖರ್ ಬಹಳ ದೊಡ್ಡ ಹೋರಾಟಗಾರರು. ರೈತರ ಪರವಾಗಿ ಹೋರಾಟ ಮಾಡಿ, ಮನೆ ಮಠ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಒಂದು ಗುಡಿಸಲಿನಲ್ಲಿ ವಾಸ ಮಾಡ್ತಾರೆ. ಅವರು ಅಂತಹ ಒಬ್ಬ ಮೇಧಾವಿ ಹೋರಾಟಗಾರರು ಎಂದು ಸಚಿವ ಪಾಟೀಲ್ ಲೇವಡಿ ಮಾಡಿದರು.
ಓದಿ: ಸಾರಿಗೆ ಸಿಬ್ಬಂದಿಯೊಂದಿಗಿನ ಸಂಧಾನ ಸಭೆ ಸಫಲ: ನಾಳೆಯಿಂದಲೇ ಬಸ್ ಸಂಚಾರ ಆರಂಭ
ಸಾರಿಗೆ ನೌಕರರನ್ನು ಬೆಂಬಲಿಸಿ ಆ ನಿಗಮಗಳನ್ನು ಹಾಳು ಮಾಡೋ ವ್ಯವಸ್ಥೆಗೆ ಕೋಡಿಹಳ್ಳಿ ಚಂದ್ರಶೇಖರ ಕೈ ಹಾಕಬಾರದು. ನೌಕರರ ಹತ್ತು ಬೇಡಿಕೆಗಳಲ್ಲಿ ಒಂಬತ್ತು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಭರವಸೆ ನೀಡಿದೆ. ಇದು ಇತಿಹಾಸ. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸಾಧ್ಯವಿಲ್ಲದ ಮಾತು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕೋವಿಡ್-19 ಮತ್ತು ಆರ್ಥಿಕ ಸಂಕಷ್ಟದ ಇಂತಹ ಪರಿಸ್ಥಿತಿಯಲ್ಲೂ ಸರ್ಕಾರ ಒಂಬತ್ತು ಬೇಡಿಕೆ ಈಡೇರಿಸುವ ಭರವಸೆ ನೀಡಿದೆ ಎಂದು ಅವರು ತಿಳಿಸಿದರು.