ರಾಣೆಬೆನ್ನೂರು: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೃಷಿ ಕಲಿಕೆ ತರಬೇತಿ ಬಗ್ಗೆ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಆರ್.ಟಿ.ಎಸ್ ಕಾಲೇಜಿನಲ್ಲಿ 'ನೂತನ ರಾಷ್ಟ್ರೀಯ ಶಿಕ್ಷಣ ನೀತಿ'ದ ಬಗ್ಗೆ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಬಸವರಾಜ ಹೊರಟ್ಟಿ ಉದ್ಘಾಟಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಶಾಲೆ ಕಲಿಯುವ ಸಮಯದಲ್ಲಿ ಕ್ರಾಫ್ಟ್, ಡ್ರಾಯಿಂಗ್, ಟೈಲರಿಂಗ್ ಜತೆಗೆ ಶಿಕ್ಷಣ ನೀಡಲಾಗುತಿತ್ತು. ಆದರೆ, ಇತ್ತೀಚಿನ ಶಿಕ್ಷಣ ನೀತಿಯಲ್ಲಿ ಕೇವಲ ಮಕ್ಕಳಿಗೆ ಅಕ್ಷರ ಶಿಕ್ಷಣ ನೀಡಲಾಗುತ್ತದೆ. ಈಗ ಬಂದಿರುವ ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳಿಗೆ ಕೃಷಿ ತರಬೇತಿ ಶಿಕ್ಷಣ ನೀಡುವಂತಹ ನೀತಿ ತರಬೇಕಾಗಿತ್ತು. ಸದ್ಯ ನೀಡುತ್ತಿರುವ ಶಿಕ್ಷಣ ಕೇವಲ ನೌಕರಿ ಶಿಕ್ಷಣವಾಗಿದೆ. ಆದರೆ, ಕಲಿತವರಿಗೆ ಸರಿಯಾಗಿ ನೌಕರಿ ಸಿಗುತ್ತಿಲ್ಲ, ಇದರಿಂದ ನಿರುದ್ಯೋಗ ಸೃಷ್ಟಿಯಾಗುತ್ತಿದೆ ಎಂದರು.
ಇದನ್ನೂ ಓದಿ: ಆಶಾದಾಯಕ: ಉನ್ನತ ಶಿಕ್ಷಣ ಪಡೆಯೋದ್ರಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ
ಇನ್ನು ಕೊರೊನಾ ಎಂಬ ಮಹಾಮಾರಿಯಿಂದ ದೇಶ ಸೇರಿದಂತೆ ರಾಜ್ಯದಲ್ಲಿ ಶಿಕ್ಷಣದ ಮೇಲೆ ಕರಿ ನೇರಳು ಬಿದ್ದಿದೆ. ಮಕ್ಕಳಿಗೆ ಶಿಕ್ಷಣ ನೀಡಲು ರಾಜ್ಯ ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವ ಸಮಯದಲ್ಲಿ ಮತ್ತೆ ಕೋವಿಡ್ ಎರಡನೇ ಅಲೆ ಪ್ರಾರಂಭವಾಗಿದೆ. ಇದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗುತ್ತದೆ ಎಂದು ಹೊರಟ್ಟಿ ಬೇಸರಗೊಂಡರು.