ರಾಣೇಬೆನ್ನೂರು: ಊರಿನಲ್ಲಿ ದೇಗುಲ ನಿರ್ಮಿಸಿ ದೇವರನ್ನು ಪೂಜಿಸುವುದು ಸಾಮಾನ್ಯ. ಆದ್ರೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ದೇಶಭಕ್ತಿ ಜಾಗೃತಿಗೊಳಿಸಲು ಭಾರತ ಮಾತೆ ಹೆಸರಿನಲ್ಲಿ ಮಂದಿರ ನಿರ್ಮಿಸಿ, ಪ್ರತಿದಿನ ಪೂಜೆ ಸಲ್ಲಿಸಲಾಗುತ್ತಿದೆ.
ಹೌದು, ದಕ್ಷಿಣ ಭಾರತದಲ್ಲೇ ಏಕೈಕ ಭಾರತ ಮಾತೆ ಮಂದಿರವನ್ನು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಮಾರುತಿ ನಗರದಲ್ಲಿ ನಿರ್ಮಿಸಿ ಪ್ರತಿ ನಿತ್ಯವೂ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತಿದೆ.
ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿ ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರಾದ ಜಿ.ಪಿ.ಮಹಾನುಭಾವಿ ಮಠ ಅವರು ದೇಶಾಭಿಮಾನಿ ಜನತಾ ಬಜಾರದ ಹತ್ತಿರ ಧ್ವಜಾರೋಹಣ ಮಾಡಿ, ನಗರದಲ್ಲಿ ಪ್ರಭಾತ ಪೇರಿ ಮಾಡುತ್ತಿದ್ದರು. ನಂತರ ಇದನ್ನು ಸುಭಾಷ ಸರ್ಕಲ್‌ಗೆ ಸ್ಥಳಾಂತರಿಸಿದರು. 1988ರಲ್ಲಿ ಭಾರತ ಮಾತೆಯ ಮೂರ್ತಿ ನಿರ್ಮಿಸಿ, ಅದನ್ನು ಎತ್ತಿನ ಬಂಡಿಯಲ್ಲಿರಿಸಿ ಮೆರವಣಿಗೆ ನಡೆಸಿದರು. ನಂತರ ಹಲವು ವರ್ಷಗಳವರೆಗೆ ಇದೇ ಆಚರಣೆ ನಡೆದುಕೊಂಡು ಬಂದಿತು. 2006 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಜಿ.ಪಿ.ಮಹಾನುಭಾವಿ ಮಠ ನಿಧನದ ನಂತರ ಅವರ ಇಚ್ಛೆಯಂತೆ ಭಾರತ ಮಾತೆಯ ಮಂದಿರ ನಿರ್ಮಿಸುವ ಸಂಕಲ್ಪ ಮಾಡಲಾಯಿತು. ಅದರಂತೆ ಮಾರುತಿ ನಗರದಲ್ಲಿ ಮಂದಿರ ಸ್ಥಾಪನೆಗೆ ನಿರ್ಧರಿಸಲಾಯಿತು.
ಭಾರತಾಂಬೆ ಮೆರವಣಿಗೆ:
ದೇಶಕ್ಕೆ ಮಧ್ಯರಾತ್ರಿ ಸ್ವಾತಂತ್ರ್ಯ ದೊರಕಿದ ಹಿನ್ನೆಲೆಯಲ್ಲಿ ಆ.14 ರ ಮಧ್ಯರಾತ್ರಿ 12 ಕ್ಕೆ ಇಲ್ಲಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಲಾಯಿತು. ನವರಾತ್ರಿ ವೇಳೆ ಇಲ್ಲಿ ಪ್ರತಿ ದಿನವೂ ಭಾರತ ಮಾತೆಯ ಮೂರ್ತಿಗೆ ಪೂಜೆ ನಡೆಸಲಾಗುತ್ತದೆ. ಪ್ರತಿವರ್ಷ ಆ.14 ರಂದು ಮೇಡ್ಲೇರಿ ರಸ್ತೆ ಆದಿಶಕ್ತಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ, 2010 ರಲ್ಲಿ ಆ.15 ರಂದು ಭಾರತ ಮಾತೆಯ ಮಂದಿರದ ಎದುರು ಅಶೋಕ ಸ್ತಂಭ ಕೂಡ ನಿರ್ಮಿಸಲಾಗಿದೆ.
ಮಂದಿರಕ್ಕೆ 28 ಅಂಕಣದ ದ್ವಾರ ಬಾಗಿಲು ನಿರ್ಮಿಸಿ, 28 ಅಂಕಣದ ಗೋಪುರ ಕಟ್ಟಿಸಿ ಪ್ರತಿಯೊಂದು ಅಂಕಣಕ್ಕೂ ಒಂದೊಂದು ರಾಜ್ಯದ ಹೆಸರಿಟ್ಟು ದ್ವಾರಬಾಗಿಲಿಗೆ ರಾಣೇಬೆನ್ನೂರು ತಾಲೂಕಿನ ಹೆಸರಿಡುವ ಕನಸಿತ್ತು ಎಂದು ಶಿವಯೋಗಿ ಮಹಾನುಭಾವಿಮಠ ಹೇಳುತ್ತಾರೆ. ಆದರೆ ಮಂದಿರದ ಅಭಿವೃದ್ಧಿಗೆ ಈವರೆಗೆ ಯಾವ ಸರ್ಕಾರ ಕೂಡ ಮುಂದಾಗುತ್ತಿಲ್ಲ. ಹೀಗಾಗಿ ಈಗ 28 ಅಂಕಣದ ದ್ವಾರ ಬಾಗಿಲು ನಿರ್ಮಿಸುವ ಉದ್ದೇಶವಿದ್ದು, ಸರ್ಕಾರ ಗಮನಹರಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.