ಹಾವೇರಿ: ಗಾಡಾ ಓಡಿಸುವ ಸ್ಪರ್ಧೆ ಉತ್ತರಕರ್ನಾಟಕದ ಜಾನಪದ ಸೊಗಡಿನ ಕ್ರೀಡೆಗಳಲ್ಲೊಂದು. ಅದರಂತೆ, ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮದಲ್ಲಿ ರಾಜ್ಯಮಟ್ಟದ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಲಾಗಿದ್ದು, ಹೆಚ್ಚಿನ ಕ್ರೀಡಾಭಿಮಾನಿಗಳು ಬಂದು ಸೇರಿದ್ದರು. ಶರವೇಗದಲ್ಲಿ ಓಡುವ ಜೋಡೆತ್ತುಗಳ ನಾಗಾಲೋಟ ನೋಡಗರನ್ನು ರೋಮಾಂಚನಗೊಳಿಸಿ ಮನೋರಂಜನೆ ನೀಡಿತು.
ಗಾಡಾಕ್ಕೆ ಜೋಡೆತ್ತುಗಳನ್ನು ಕಟ್ಟಿ ನಿರ್ಣಾಯಕರ ಸನ್ನೆ ಸಿಗುತ್ತಿದ್ದಂತೆ ರೈತರು ಗಾಡಾ ಓಡಿಸಲಾರಂಭಿಸಿದರು. ರೈತರು ಓಡಿಸುತ್ತಿದ್ದ ಗಾಡಾಗಳಿಗೆ ವೀಕ್ಷಕರು ಚಪ್ಪಾಳೆ ಹಾಕಿ ಹುರಿದುಂಬಿಸಿದರು. ಸನ್ನೆ ಸಿಗುತ್ತಿದ್ದಂತೆ ಕ್ಷಣಾರ್ಧದಲ್ಲಿ ಮಾಯವಾಗುತ್ತಿದ್ದ ಜೋಡೆತ್ತುಗಳ ಓಟ ನೋಡುಗರ ಎದೆ ಝಲ್ಲೆನಿಸುವಂತಿತ್ತು.
ಸ್ಪರ್ಧೆಯಲ್ಲಿ ಹಾವೇರಿ, ಬೆಳಗಾವಿ, ಧಾರವಾಡ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ರೈತರು ತಮ್ಮ ಎತ್ತುಗಳ ಜೊತೆ ಆಗಮಿಸಿದ್ದರು. ಇದಕ್ಕಾಗಿ ಎತ್ತುಗಳಿಗೆ ವಿಶೇಷ ತಿನಿಸುಗಳನ್ನು ತಿನ್ನಿಸಿ, ಗಾಡಾ ಓಡಿಸುವ ಸ್ಪರ್ಧೆಗೆ ತಯಾರಿ ಮಾಡಿಕೊಂಡು ಬಂದಿದ್ದರು.
ಈ ಸುದ್ದಿಯನ್ನೂ ಓದಿ: 'ಪ್ರೇಮಿಗಳ ದಿನಕ್ಕೆ 5 ದಿನ ರಜೆ ಕೊಡಿ ಸರ್'; ವೈರಲ್ ಆಯ್ತು ಕೊಳ್ಳೇಗಾಲ ವಿದ್ಯಾರ್ಥಿಯ ರಜಾ ಅರ್ಜಿ
ಗಾಡಾ ಸ್ಪರ್ಧಿಗಳಿಗೆ ಒಂದು ನಿಮಿಷದ ಕಾಲಾವಕಾಶ ನೀಡಲಾಗಿತ್ತು. ಸ್ಪರ್ಧೆಯಲ್ಲಿ ಹೆಚ್ಚು ದೂರ ಓಡಿದ ಜೋಡೆತ್ತುಗಳ ಜೋಡಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ರೈತರ ಸುಗ್ಗಿಹಬ್ಬಗಳೆಲ್ಲ ಬಹುತೇಕ ಮುಗಿದಿದ್ದು, ಅನ್ನದಾತ ಇದೀಗ ಜಾನಪದ ಕ್ರೀಡೆಗಳತ್ತ ಮುಖಮಾಡಿದ್ದಾನೆ.