ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಮಳೆ ಬರುವುದಕ್ಕೂ ಮುನ್ನ ಸಿಡಿಲು (lightning strikes) ಬಡಿದು ತೆಂಗಿನಮರವೊಂದು ಹೊತ್ತಿ ಉರಿದ ಘಟನೆ ನಡೆದಿದೆ.
ಹಾನಗಲ್ ಪಟ್ಟಣದ ಕಂಚಗಾರ ಓಣಿಯಲ್ಲಿರುವ ತೆಂಗಿನಮರಕ್ಕೆ ಮಂಗಳವಾರ ಸಂಜೆ ಸಿಡಿಲು ಹೊಡೆದಿದೆ. ಪರಿಣಾಮ ತೆಂಗಿನಮರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕಿಡಿಗಳು ಮರದಿಂದ ಕೆಳಗೆ ಬೀಳುತ್ತಿದ್ದ ಹಿನ್ನೆಲೆ ಕೆಲ ಕಾಲ ಸ್ಥಳೀಯರು ಆತಂಕಗೊಂಡರು.
ಇನ್ನು ಹಾವೇರಿ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದು, ಸಂಜೆಯಾಗುತ್ತಿದ್ದಂತೆ ಗುಡುಗು - ಸಿಡಿಲು ಸಹಿತ ಮಳೆಯಾಗುತ್ತಿದೆ. ಮಂಗಳವಾರ ಸಂಜೆ ಸಹ 30 ನಿಮಿಷಕ್ಕೂ ಅಧಿಕ ಕಾಲ ವರುಣ ಆರ್ಭಟಿಸಿದ್ದಾನೆ. ಜಿಲ್ಲೆಯ ವಿವಿಧೆಡೆ ಸುರಿದ ಮಳೆಯಿಂದಾಗಿ ಹಲವು ರಸ್ತೆಗಳು ಹಾಳಾಗಿವೆ. ಜೊತೆಗೆ ಹತ್ತಿ ಮತ್ತು ಮೆಕ್ಕೆಜೋಳದ ಬೆಳೆ ಸಹ ಹಾನಿಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral video: ಧಾರವಾಡದಲ್ಲಿ ಅಪ್ಪು ಹಾಡಿದ್ದ ಹಿಂದಿ ಹಾಡು ಈಗ ವೈರಲ್