ಹಾಸನ : ಮಂಗಳವಾರ ರಾತ್ರಿ ಊಟ ಸೇವಿಸಿದ ಬಳಿಕ 60 ಸೈನಿಕರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಡುಗರವಳ್ಳಿ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗಿನಜಾವ ಅಸ್ವಸ್ಥಗೊಂಡ ಯೋಧರನ್ನು ಪೈಕಿ 42 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಡುಗರ ಕ್ಯಾಂಪ್ನಲ್ಲಿರುವ ವಾಹನ ಚಾಲನಾ ತರಬೇತಿಯ ಪ್ರಶಿಕ್ಷಣಾರ್ಥಿಗಳು ಮಂಗಳವಾರ ರಾತ್ರಿ ಎಂದಿನಂತೆ ಊಟ ಸೇವಿಸಿದ್ದರು. ಬಳಿಕ ಸುಮಾರು 60 ಮಂದಿ ಯೋಧರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ. ಬಳಿಕ ಇವರನ್ನು ಸಕಲೇಶಪುರದ ಗ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ನಿನ್ನೆ (ಜೂನ್ 06) ಸಕಲೇಶಪುರದ ಕುಡುಗರಹಳ್ಳಿಯ ಆರ್ಮಿ ಡ್ರೈವಿಂಗ್ ತರಬೇತಿ ಶಿಬಿರದ 103 ಪ್ರಶಿಕ್ಷಣಾರ್ಥಿಗಳು ಭೋಜನ ಮಾಡಿದ್ದರು. ಆಲೂ-ಪನೀರ್ ಸಬ್ಜಿ, ರೈಸ್ ಖೀರ್, ರೋಟಿ, ಅನ್ನ ಮತ್ತು ದಾಲ್ನ್ನು ಮೆನು ಒಳಗೊಂಡಿತ್ತು. ಬುಧವಾರ ಬೆಳಗಿನ ಉಪಾಹಾರಕ್ಕೂ ಮುನ್ನ ಸುಮಾರು 60 ಪ್ರಶಿಕ್ಷಣಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇವರಲ್ಲಿ 42 ಪ್ರಶಿಕ್ಷಣಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 21 ಮಂದಿಯ ಆರೋಗ್ಯ ಸಂಪೂರ್ಣ ಸ್ಥಿರವಾಗಿದ್ದು, ಇನ್ನೂ 21 ಮಂದಿ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಪರೀಕ್ಷೆಗಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ತಂಡದಿಂದ ಆಹಾರ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಮಿಥುನ್ ಹಾಗೂ ಗ್ರಾಮೀಣ ಪಿಎಸ್ಐ ಬಸವರಾಜ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.