ಹಾಸನ: ವೈವಾಹಿಕ ಜಾಲತಾಣವಾದ ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿ ಮದುವೆಯಾಗುತ್ತೇನೆಂದು ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಓರ್ವ ಮಹಿಳೆ ಸೇರಿ ಇಬ್ಬರು ಆರೋಪಿಗಳ ಅರೆಸ್ಟ್ ಮಾಡುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಲನಚಿತ್ರ ಸಹ ಕಲಾವಿದ, ಶುಂಠಿ ವ್ಯಾಪಾರಿಯನ್ನು ಹನಿಟ್ರ್ಯಾಪ್ ಮೂಲಕ ವಂಚಿಸಿರುವ ಇವರನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಲಕ್ಷ್ಮೀ ಹಾಗೂ ಶಿವು ಅಲಿಯಾಸ್ ಶಿವಣ್ಣ ಬಂಧಿತ ಆರೋಪಿಗಳು. ಹಾಸನದ ವಿಜಯನಗರ ಬಡಾವಣೆಯ ಪರಮೇಶ್ ಎಂಬ ವ್ಯಕ್ತಿ ನೀಡಿರುವ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?
ಪರಮೇಶ್ ಎಂಬ 40 ವರ್ಷದ ಅವಿವಾಹಿತ ಮ್ಯಾಟ್ರಿಮೋನಿ ಮೂಲಕ ಮಹಿಳೆಯೋರ್ವರ ಪರಿಚಯ ಮಾಡಿಕೊಂಡು, ಬೆಂಗಳೂರಿನ ಯಲಹಂಕದಲ್ಲಿ ಭೇಟಿಯಾಗಿ ಮದುವೆ ಮಾತುಕತೆ ನಡೆಸಿಕೊಂಡಿದ್ದರು. ಪರಮೇಶನನ್ನ ಭೇಟಿಯಾದ ದಿನವೇ ಆರೋಪಿ ಲಕ್ಷ್ಮೀ ತಾನು ಅನಾಥೆ, ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದ್ದೇನೆ. ಸದ್ಯ ಕಂದಾಯ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದು, ನನಗೆ ಬರುವ ಸಂಪೂರ್ಣ ಸಂಬಳ ಚಿಕ್ಕಮ್ಮ ಪಡೆದುಕೊಳ್ಳುತ್ತಾರೆ. ಕಷ್ಟದಲ್ಲಿ ಜೀವನ ನಡೆಸುತ್ತಿದ್ದೇನೆಂದು ಹೇಳಿ 5 ಸಾವಿರ ರೂಪಾಯಿ ಪಡೆದುಕೊಂಡಿದ್ದಳು.
ಪರಮೇಶನಿಗೆ 6 ಲಕ್ಷ ರೂ ವಂಚನೆ:
ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ನಟನೆ ಮಾಡುತ್ತಿದ್ದ ಪರಮೇಶ್ ಕೊರೊನಾ ಸಂದರ್ಭದಲ್ಲಿ ಸ್ವಗ್ರಾಮ ಹಾಸನದ ಹಳೇಬೀಡು ಸಮೀಪದ ನಾಗರಾಜಪುರಕ್ಕೆ ಬಂದು ಐದು ಎಕರೆ ಜಮೀನು ಗುತ್ತಿಗೆ ಪಡೆದು ಶುಂಠಿ ಬೆಳೆದಿದ್ದನು. ಲಾಕ್ಡೌನ್ ಕಾರಣ ಲಕ್ಷೀಯನ್ನು ಭೇಟಿಯಾಗಲು ಸಾಧ್ಯವಾಗದೆ ಮೊಬೈಲ್ ಮೂಲಕ ಇಬ್ಬರೂ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಸ್ನೇಹ ಹೆಚ್ಚಾಗಿದೆ. ಇದರ ಸದುಪಯೋಗ ಪಡೆದುಕೊಂಡ ಮಹಿಳೆ ತನಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿ, ಡಿಸೆಂಬರ್ 2019 ರಿಂದ ಜೂನ್ 2020ರ ತನಕ ಸುಮಾರು 6 ಲಕ್ಷ ರೂಪಾಯಿ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾಳೆ. ಇದಾದ ಬಳಿಕ ಮದುವೆಯಾಗುವುದಿಲ್ಲ ಎಂದು ಹೇಳಿ, ಫೋನ್ ಮಾಡದಂತೆ ವಾರ್ನ್ ಮಾಡಿದ್ದಾಳೆ. ಜತೆಗೆ ಅತ್ಯಾಚಾರದ ಕೇಸ್ ದಾಖಲು ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ.
ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಹಾಸನ ಪೊಲೀಸ್ ಠಾಣೆಯಲ್ಲಿ ಪರಮೇಶ್ ದೂರು ದಾಖಲು ಮಾಡಿದ್ದಾರೆ. ಇದರ ಜತೆಗೆ ಪೊಲೀಸರ ಮಾರ್ಗದರ್ಶನದಂತೆ ಹಾಸನಕ್ಕೆ ಕರೆಯಿಸಿದ್ದಾರೆ. ಈ ವೇಳೆ ಲಕ್ಷ್ಮೀ ಮತ್ತು ಶಿವು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ನಡೆಸಿದಾಗ ಆಕೆ ಸುಮಾರು 10 ಮಂದಿಗೆ ಮದುವೆಯಾಗುವುದಾಗಿ ನಂಬಿಸಿ, 2 ಕೋಟಿಗೂ ಅಧಿಕ ರೂ. ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈಕೆಯ ಬಂಧನ ವಿಚಾರ ತಿಳಿದು ನಾಲ್ವರು ಹಾಸನಕ್ಕೆ ಬಂದು ದೂರು ದಾಖಲು ಮಾಡಿದ್ದಾರೆ.