ಹಾಸನ : ಹನಿ ಹನಿ ಜಲ ಸಂರಕ್ಷಣೆ ಮಾಡುವ ಕಾಯಕದಲ್ಲಿ ಪ್ರತಿಯೊಬ್ಬರು ಮುಂದಾಗುವಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಏಕಲವ್ಯ ರೋವರ್ ಮುಕ್ತ ದಳದ ನಾಯಕ ಆರ್ ಜಿ ಗಿರೀಶ್ ತಿಳಿಸಿದರು.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯವೇ ಲಾಕ್‌ಡೌನ್ ಇದ್ದರೂ ಸಹ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಏಕಲವ್ಯ ರೋವರ್ ಮುಕ್ತ ದಳ ಅರಸೀಕೆರೆ ತಾಲೂಕು ಹಂದ್ರಾಳು ಗ್ರಾಮದಲ್ಲಿ ಜೀವ ಜಲ ಉಳಿಸಿ ಜೀವ ಸಂಕುಲ ಸಂರಕ್ಷಿಸಿ ಜಲ ಆಂದೋಲನ ನಿಮಿತ್ತ ಹಮ್ಮಿಕೊಂಡಿದ್ದ ಕಲ್ಯಾಣಿ ಪುನಶ್ಚೇತನ ಶ್ರಮದಾನದಲ್ಲಿ ಪಾಲ್ಗೊಂಡು ಕಲ್ಯಾಣಿ ಸ್ವಚ್ಛಗೊಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಜೀವಜಲ ಇಲ್ಲದ ಜಗತ್ತನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಕೂಡ ಜಲಸಂರಕ್ಷಣೆ ಕಾರ್ಯಕ್ರಮದಲ್ಲಿ ಪ್ರಜ್ಞಾವಂತರಾಗಿ ಜೀವಜಲ ಉಳಿಸುವ ಕಾಯಕದಲ್ಲಿ ಪಾಲ್ಗೊಳ್ಳಬೇಕೆಂದು ಜನತೆಯಲ್ಲಿ ಮನವಿ ಮಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಏಕಲವ್ಯ ರೋವರ್ ಮುಕ್ತ ದಳ, ವೈಎಸ್‌ಆರ್ ಫೌಂಡೇಶನ್ ಮತ್ತು ಹಂದ್ರಾಳು ಗ್ರಾಮಸ್ಥರ ಸಹಕಾರದಲ್ಲಿ ಕಲ್ಯಾಣಿ ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಯಿತು.
300 ವರ್ಷಗಳ ಇತಿಹಾಸವುಳ್ಳ ಕಲ್ಯಾಣಿಯಲ್ಲಿ ಸಾಕಷ್ಟು ಪದರಗಳು ಹಾಗೂ ಗಿಡಗಂಟೆಗಳು ಬೆಳೆದು ಪಾಳುಬಿದ್ದಿತ್ತು. ಕಲ್ಯಾಣಿಯ ಪುನಶ್ಚೇತನ ಮಾಡುವುದರಿಂದ ಮಳೆಗಾಲದಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತದೆ. ಇದರಿಂದ ಪ್ರಾಣಿ-ಪಕ್ಷಿಗಳಿಗೂ ಕುಡಿಯಲು ನೀರು ಸಿಗುತ್ತದೆ. ಜೊತೆಗೆ ಕೊಳವೆಬಾವಿಗಳ ಅಂತರ್ಜಲ ಹೆಚ್ಚಳಕ್ಕೂ ಕಾರಣವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಕೂಡ ಕೆರೆ, ಕಟ್ಟೆ, ಕಲ್ಯಾಣಿ ಪುನಶ್ಚೇತನ ಮಾಡುವಂತೆ ಜನತೆಯಲ್ಲಿ ಮನವಿ ಮಾಡಿದರು.
ಶ್ರಮದಾನದಲ್ಲಿ ವೈಎಸ್‌ಆರ್ ಫೌಂಡೇಶನ್ ಅಧ್ಯಕ್ಷ ವೈಎಸ್ ರಮೇಶ್, ಗ್ರೀನ್ ಹಾಸನ್ ಫೌಂಡೇಶನ್ ಉಪಾಧ್ಯಕ್ಷ ಉಮೇಶ, ಹಂದ್ರಾಳು ಗ್ರಾಮದ ಸದಾಶಿವ ಹಾಗೂ ಬಸವರಾಜು, ಸಿಂಗಟಗೆರೆ ಗ್ರಾಮದ ಪ್ರಕಾಶ್ ಎಂಬುವರು ಸೇರಿದಂತೆ ರೋವರ್ಸ್ ರೇಂಜರ್ಸ್ ಪಾಲ್ಗೊಂಡು ಪಾಳುಬಿದ್ದಿದ್ದ ಕಲ್ಯಾಣಿ ಸ್ವಚ್ಛಗೊಳಿಸಿದರು.