ಹಾಸನ: ಕರ್ನಾಟಕ ಬಂದ್ಗೆ ಏನಾದ್ರೂ ವಿರೋಧ ಮಾಡಲು ಮುಂದಾದ್ರೆ ರೈತರು ಮತ್ತು ಕನ್ನಡಪರ ಸಂಘಟನೆಗಳೆಲ್ಲ ಸೇರಿ ಅನಿರ್ದಿಷ್ಟಾವಧಿ ಬಂದ್ಗೆ ಚಿಂತನೆ ನಡೆಸುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಿದ್ದು, ರೈತರ ಹೆಸರಿನಲ್ಲಿ ಹೊರತು ಬಿಜೆಪಿ ಹೆಸರಿನಲ್ಲಲ್ಲ. ಹಸಿರು ಶಾಲು ಹಾಕಿಕೊಂಡು ಕೈಬೀಸುತ್ತಿದ್ದವರು ಈಗ ರೈತರನ್ನು ತುಳಿಯಲು ಹೊರಟಿದ್ದಾರೆ. ರೈತರುಗಳೆಲ್ಲ ಇವರ ಗುಲಾಮರಲ್ಲ ಎಂದು ಕಿಡಿಕಾರಿದರು. ರೈತರನ್ನು ಕೊಲ್ಲುವ ಎರಡು ಮಸೂದೆಗಳನ್ನು ಹಿಂಪಡೆಯಲೇಬೇಕು. ರೈತರ ಜಮೀನನ್ನು ದೊಡ್ಡ-ದೊಡ್ಡ ಕಾರ್ಖಾನೆ ಮಾಲೀಕರು, ಶ್ರೀಮಂತರು ಸೇರಿ ಯಾರು ಬೇಕಾದ್ರೂ ಕೊಂಡುಕೊಳ್ಳಬಹುದಾದ ಮಸೂದೆಗಳಿವೆ. ಇವು ರೈತರ ಮರಣ ಶಾಸನವಾಗಿವೆ.
ಈ ಮಸೂದೆಗಳನ್ನು ಹಿಂಪಡೆಯದೇ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿಗಳನ್ನು ಪ್ರಶ್ನೆ ಮಾಡದೇ ಸಚಿವರು, ಶಾಸಕರು ಹಾಗೂ ಸಂಸದರು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಸರ್ವಾಧಿಕಾರದ ಚಿಂತನೆಯನ್ನು ಮುಖ್ಯಮಂತ್ರಿಗಳು ಮೊದಲು ಬಿಡಬೇಕು ಎಂದು ಒತ್ತಾಯಿಸಿದರು. ನಾಳೆ ವಿನೂತನವಾದ ಚಳವಳಿ ನಡೆಯಲಿದೆ. ಬಂದ್ ಹತ್ತಿಕ್ಕಲು ಕಮಿಷನರ್ ಮತ್ತು ಡಿಜಿಗೆ ಪೂರ್ಣ ಅಧಿಕಾರ ನೀಡಿದ್ದಾರೆ.
ಕಮಿಷನರ್ ಮತ್ತು ಡಿಜಿ ಇಬ್ಬರೂ ಕನ್ನಡಿಗರಲ್ಲ. ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಮಾರವಾಡಿ. ಸಿಎಂ ಯಡಿಯೂರಪ್ಪನವರು ಎಲ್ಲಾ ಕಡೆ ಪರಭಾಷೆಯವರನ್ನು ಹಾಕುತ್ತಿದ್ದಾರೆ ಎಂದು ದೂರಿದರು. ಹೋಟೆಲ್ ಬಾಗಿಲು ಯಾರಾದ್ರೂ ತೆಗೆದ್ರೆ ಎಲ್ಲರೂ ಹೋಗಿ ಹೊಟ್ಟೆ ತುಂಬ ತಿಂದು ನಂತರ ಯಾರೂ ಹಣ ಕೊಡಬೇಡಿ ಎಂದರು.