ಹಾಸನ: ವೈಕುಂಠ ಏಕಾದಶಿಯ ಪ್ರಯುಕ್ತ ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಲೇಕಲ್ ತಿರುಪತಿಯಲ್ಲಿ ವಿಶೇಷ ಅಲಂಕಾರ ಮಾಡಿರೋದು ಭಕ್ತರ ಕಣ್ಮನ ಸೆಳೆಯುತ್ತಿದೆ.
ರಾಜ್ಯದ ಚಿಕ್ಕತಿರುಪತಿ ಎಂದೇ ಹೆಸರಾಗಿರುವ ಅಮರಗಿರಿ ಮಾಲೇಕಲ್ ತಿರುಪತಿಯಲ್ಲಿ ಭಕ್ತರು ವಿಜೃಂಭಣೆಯಿಂದ ವೈಕುಂಠ ಏಕಾದಶಿಯನ್ನು ಏರ್ಪಾಡು ಮಾಡಿದ್ದಾರೆ. ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಗೋವಿಂದರಾಜ ಸ್ವಾಮಿಗೆ ಸೀತಾಸ್ವಯಂವರದ ವಿಶೇಷ ಅಲಂಕಾರ ಮಾಡುವ ಮೂಲಕ ಭಕ್ತರಿಗೆ ಮುಂಜಾನೆಯಿಂದಲೇ ದರ್ಶನದ ಭಾಗ್ಯ ಕಲ್ಪಿಸಲಾಗಿದೆ.
ಬೆಳಗ್ಗಿನಿಂದಲೇ ರಾಜ್ಯದೆಲ್ಲೆಡೆಯಿಂದ ಭಕ್ತರು ಆಗಮಿಸಿದ್ದಾರೆ. ಸಾಲಿನಲ್ಲಿ ನಿಂತು ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದಾರೆ. ತಿರುಪತಿಯಂತೆ ರಾಜ್ಯದ ಚಿಕ್ಕತಿರುಪತಿಯಲ್ಲಿಯೂ ಕೂಡ ವೈಕುಂಠ ದ್ವಾರ ನಿರ್ಮಿಸಿ ಭಕ್ತರಿಗೆ ವೈಕುಂಠ ದ್ವಾರದ ಮೂಲಕ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.
ದರ್ಶನದ ಬಳಿಕ ಪ್ರತಿ ಭಕ್ತಾದಿಗಳಿಗೂ ಲಡ್ಡು ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ಕರವೇ ನಾರಾಯಣಗೌಡ ಕುಟುಂಬದಿಂದ ವೆಂಕಟೇಶ್ವರನಿಗೆ ಅಲಂಕಾರ ಸೇವೆ ಮಾಡಲಾಗಿದೆ. ಬರುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯ ಕೂಡ ಏರ್ಪಡಿಸಲಾಗಿದೆ.
ದೇವಾಲಯದ ಮುಂಭಾಗದ ಕ್ಷೇತ್ರಪಾಲಕ ಕೆಂಚರಾಯ ಹಾಗೂ ಆಂಜನೇಯ ಸ್ವಾಮಿಗೆ ವಿಶೇಷ ಮುತ್ತಿನ ಹೂವಿನ ಅಲಂಕಾರ ಏರ್ಪಡಿಸಲಾಗಿದೆ. ತುಮಕೂರು ಜಿಲ್ಲೆಯ ತಿಪಟೂರಿನ ಹಳೆಪಾಳ್ಯದಿಂದ ಶ್ರೀಸ್ವಾಮಿಯವರ ದರ್ಶನಕ್ಕೆ ಪಾದಯಾತ್ರೆ ಮೂಲಕ ಸಾವಿರಾರು ಭಕ್ತರು ತಿರುಪತಿಗೆ ಆಗಮಿಸಿದ್ದಾರೆ. ಚಿಕ್ಕ ತಿರುಪತಿ ಇವತ್ತು ವೈಕುಂಠ ಏಕಾದಶಿ ಪ್ರಯುಕ್ತ ವಿಜೃಂಭಿಸುತ್ತಿದೆ.