ಹಾಸನ: ಅರಸೀಕೆರೆ ತಾಲೂಕಿನ ಬೆಂಡೆಕೆರೆ ಗ್ರಾಮದಲ್ಲಿ ಶಂಕಾಸ್ಪದ ರೀತಿಯಲ್ಲಿ ಎರಡು ಹಸುಗಳು ಸಾವನ್ನಪ್ಪಿವೆ.
ವಸಂತ್ ಕುಮಾರ್ ಎಂಬವರಿಗೆ ಸೇರಿದ ಹೆಚ್ಎಫ್, ಜರ್ಸಿ ತಳಿಯ ಹಸುಗಳಾಗಿದ್ದು, ತೋಟದ ಮನೆಯಲ್ಲಿ ರಾತ್ರಿ ಹಾಲು ಕರೆದು ಮೇವು ಹಾಕಿ ಕಟ್ಟಲಾಗಿತ್ತು. ಬೆಳಗ್ಗೆ ಬಂದು ನೋಡಿದಾಗ ಹಸುಗಳು ಮೃತಪಟ್ಟಿರುವುದು ಗೊತ್ತಾಗಿದೆ.
ಯಾರೋ ಬಾಳೆಹಣ್ಣಿನ ಮೂಲಕ ವಿಷವುಣಿಸಿ ಹಸುಗಳನ್ನು ಸಾಯಿಸಿದ್ದಾರೆ ಎಂಬ ಅನುಮಾನ ಮಾಲೀಕ ವಸಂತ್ ಅವರದ್ದಾಗಿದೆ. ಈ ಹಸುಗಳು ಸುಮಾರು 1.5 ಲಕ್ಷ ಬೆಲೆ ಬಾಳುತ್ತಿದ್ದವು ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಅರಸೀಕೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಶುವೈದ್ಯಕೀಯ ವರದಿ ಬಂದ ಬಳಿಕ ಸತ್ಯಾಂಶ ಬೆಳಕಿಗೆ ಬರಲಿದೆ.