ಹಾಸನ: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಹಾಸನದಲ್ಲಿ ಮಾತ್ರ 70 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸ್ವಯಂಪ್ರೇರಿತವಾಗಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವ ಮೂಲಕ ಮೇಲಾಧಿಕಾರಿಗಳ ಮನವಿಗೆ ಸ್ಪಂದಿಸಿದ್ದಾರೆ.
ಎರಡು ದಿನಗಳಿಂದ ನಡೆಯುತ್ತಿರುವ ಕೆಎಸ್ಆರ್ಟಿಸಿ ಮುಷ್ಕರ ಹಿನ್ನೆಲೆ ಇಂದು ಪ್ರಾದೇಶಿಕ ಸಾರಿಗೆ ಕಾರ್ಯಗಾರ (ಕಿಪ್ಕೋ)ದ ಸುಮಾರು 70 ಮಂದಿ ಸಿಬ್ಬಂದಿ ಮಧ್ಯಾಹ್ನ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಮತ್ತು 6ನೇ ವೇತನ ಆಯೋಗ ಜಾರಿಯಾಗಬೇಕು ಎಂಬುದು ಸೇರಿದಂತೆ ಇನ್ನುಳಿದ 6 ಬೇಡಿಕೆಗಳನ್ನು ಮುಂದಿಟ್ಟು ನಿನ್ನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ನಿನ್ನೆ ಮೊದಲ ದಿನವಾಗಿದ್ದರಿಂದ ಕಿಪ್ಕೋ ನೌಕರರು ಬಿಟ್ಟರೆ ಕೆಎಸ್ಆರ್ಟಿಸಿ ಸಂಸ್ಥೆಗೆ ಒಳಪಡುವ ಯಾವೊಬ್ಬ ನೌಕರರು ಕೂಡ ಹಾಜರಾಗಿರಲಿಲ್ಲ.
ನಿನ್ನೆ ಪ್ರಾದೇಶಿಕ ಕಾರ್ಯಗಾರದ ವ್ಯವಸ್ಥಾಪಕ ಲಕ್ಷ್ಮಣ್ ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಿಗೆ ಮನವಿ ಸಲ್ಲಿಸಿದ್ದರು. ಆದರೆ ನೌಕರರು ಪ್ರತಿಭಟನೆ ಕೈ ಬಿಟ್ಟಿರಲಿಲ್ಲ. ಬಳಿಕ ನೋ ವರ್ಕ್ ನೋ ಪೇ ಎಂಬ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ಜಾರಿಯಾದ ಹಿನ್ನೆಲೆ ಸುಮಾರು 70 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇನ್ನು ನಾಳೆ ಇನ್ನುಳಿದ ಸಿಬ್ಬಂದಿ ಕೂಡ ಹಾಜರಾಗುವ ಸಾಧ್ಯತೆ ಇದೆ ಎಂದು ಲಕ್ಷ್ಮಣ್ ಮಾಹಿತಿ ನೀಡಿದ್ದಾರೆ.