ಹಾಸನ: ಕಳೆದ ಐದಾರು ವರ್ಷಗಳಲ್ಲೇ ಈ ಬಾರಿಯ ಮಳೆ ಅವಾಂತರ ಸೃಷ್ಟಿಸಿರುವುದು ದೊಡ್ಡಮಟ್ಟದ ಅನಾಹುತ. ಇವತ್ತಿನ ಪರಿಸ್ಥಿತಿ ನೋಡಿದ್ರೆ ಎಲ್ಲರ ಕೈಮೀರಿ ಹೋಗಿರುವುದು ದುರಂತ ಅನಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೊಡಗು ಮತ್ತು ಸಕಲೇಶಪುರ ಭಾಗದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಕನಿಷ್ಠ ಒಂದು ವಾರ ಕ್ಯಾಂಪ್ ಮಾಡಿದರು ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಬೆಳಗಾವಿ ಭಾಗದಲ್ಲಿನ ಉಂಟಾಗಿರುವಂಥ ಪರಿಸ್ಥಿತಿ ಹಾಸನದಲ್ಲಿ ಕೂಡ ನಿರ್ಮಾಣವಾಗಿದೆ ಎಂದರು.
ಇನ್ನು ಈಗಾಗಲೇ ರಾಜ್ಯದಲ್ಲಿ 4ರಿಂದ 5 ಲಕ್ಷ ಮಂದಿ ತಮ್ಮ ಗ್ರಾಮಗಳನ್ನು ತೊರೆದಿದ್ದಾರೆ. ಕೇಂದ್ರ ಸರ್ಕಾರದಿಂದ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಅಮಿತ್ ಶಾ ಈಗಾಗಲೇ ಸರ್ವೇ ಮಾಡಿದ್ದಾರೆ. ಕರ್ನಾಟಕ ಜನತೆಗೆ ವಿಶ್ವಾಸ ಮೂಡಿಸಲು ಕೇಂದ್ರ ತನ್ನ ನಿಲುವು ಪ್ರಕಟಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿತ್ತು. ಕೆಲ ಅಧಿಕಾರಿಗಳು ಹಾನಿ ಬಗ್ಗೆ ಮಾಹಿತಿ ಮತ್ತು ಯಾವುದೇ ಭರವಸೆಗಳನ್ನು ಕೊಟ್ಟಿಲ್ಲ. ಕೇಂದ್ರ ಸರ್ಕಾರದಿಂದ ಬೇರೆ ರಾಜ್ಯಗಳಿಗೆ ಕೊಟ್ಟ ನೆರವು ಮತ್ತು ನಮ್ಮ ರಾಜ್ಯಕ್ಕೆ ಕೊಟ್ಟ ನೆರವಿನಲ್ಲಿ ವ್ಯತ್ಯಾಸವಿದೆ ಅಂತ ಅಸಮಾಧಾನ ಹೊರಹಾಕಿದ್ರು.
ಇದೇ ವೇಳೆ ಜಿಲ್ಲಾಉಸ್ತುವಾರಿ ಸಚಿವರ ನೇಮಕಕ್ಕೆ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಪ್ರವಾಹ ಉಲ್ಬಣಿಸಿ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಇಂತಹ ಕಾರ್ಯಗಳನ್ನು ಸ್ವಲ್ಪ ದೂರ ಇಟ್ಟರೆ ಒಳ್ಳೆಯದು ಅಂತ ಸರ್ಕಾರಕ್ಕೆ ಹೆಚ್ಡಿಕೆ ಸಲಹೆ ನೀಡಿದ್ರು. ಇನ್ನು ಬಿಜೆಪಿ ಸರ್ಕಾರ ಪ್ರವಾಹ ಪೀಡಿತರ ಜೀವನ ಮಟ್ಟವನ್ನು ಮೇಲೆತ್ತಲು ಟೇಕಾಫ್ ಆಗಬೇಕೇ ಹೊರತು ಉಸ್ತುವಾರಿ ಸಚಿವರ ಉದಯ ಬೆಟ್ಟಿಂಗ್ನಲ್ಲಲ್ಲ ಅಂತ ಮಾತಿನ ಮೂಲಕ ಕುಟುಕಿದರು.
ಕೇಂದ್ರ ಸರ್ಕಾರ ತಕ್ಷಣ 4500 ಕೋಟಿ ಪರಿಹಾರ ಬಿಡುಗಡೆ ಮಾಡಬೇಕು ಅಂತ ಒತ್ತಾಯಿಸಿದ ಕುಮಾರಸ್ವಾಮಿ, ನನ್ನ ಅವಧಿಯಲ್ಲಿ 198 ಕೋಟಿ ಕೊಡಗು ಪರಿಹಾರ ನಿಧಿಗೆ ಸಂಗ್ರಹವಾಗಿತ್ತು. ಈಗಲೂ ಆ ಹಣ ಉಳಿದಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಅಂತ ಸಿಎಂಗೆ ಸಲಹೆ ನೀಡಿದ್ರು. ಇನ್ನು ಆ. 16ರ ನಂತರ ಮತ್ತೆ 8-10 ದಿನಗಳ ಕಾಲ ಸಕಲೇಶಪುರ ಮೂಡಿಗೆರೆ ಭಾಗದಲ್ಲಿ ಪ್ರವಾಸ ಮಾಡಲಿದ್ದು, ರಾಜಕೀಯ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಿ, ನೊಂದವರಿಗೆ ಆತ್ಮಸ್ಥೈರ್ಯ ತುಂಬುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು.