ಹಾಸನ: ನಗರದಲ್ಲಿ ಲಾರಿ ನಿಲುಗಡೆ ಪ್ರದೇಶಕ್ಕೆ ಸ್ವಂತ ನೆಲೆ ಸಿಗುವ ಲಕ್ಷಣಗಳೇ ಕಾಣದಂತಾಗಿದ್ದು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಲಾರಿ ಮಾಲೀಕರು ಮತ್ತು ಚಾಲಕರು ಕಂಗಾಲಾಗಿದ್ದಾರೆ.
ರಾಜಘಟ್ಟ ರಸ್ತೆಯಲ್ಲಿರುವ ರೈಲು ನಿಲ್ದಾಣ ಸಮೀಪ ರೈಲ್ವೆ ಇಲಾಖೆಗೆ ಸೇರಿದ 10 ಎಕರೆ ಜಾಗದಲ್ಲಿ ತಾತ್ಕಾಲಿಕವಾಗಿ ಟ್ರಕ್ ಟರ್ಮಿನಲ್‌ಗೆ ಜಾಗ ನೀಡಲಾಗಿದೆ. ಪ್ರತಿ ದಿನ ನೂರಾರು ಲಾರಿಗಳನ್ನು ನಿಲ್ಲಿಸಲಾಗುತ್ತದೆ. ಆದರೀಗ ಮೂಲ ಸೌಲಭ್ಯ ಇಲ್ಲದೇ ಅವ್ಯವಸ್ಥೆಯ ಆಗರವಾಗಿದೆ. ಹಾಸನ ಜಿಲ್ಲಾ ಲಾರಿ ಮಾಲೀಕರ ಸಂಘದ ವತಿಯಿಂದಲೇ ಮಣ್ಣು ಸುರಿಸಿ ಸಮತಟ್ಟು ಮಾಡಿಸಿದ್ದರೂ ಸಹ ಮಳೆ ಬಂದರೆ ಲಾರಿಗಳನ್ನು ಹೊರಗೆ ತೆಗೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ.
ಪ್ರಸ್ತುತ ಈ ಟರ್ಮಿನಲ್‌ನಲ್ಲಿ 500 ಲಾರಿಗಳ ನಿಲುಗಡೆಗೆ ಸ್ಥಳಾವಕಾಶವಿದೆ. ಆದರೆ, ಶಾಶ್ವತ ನೆಲೆ ಸಿಗದ ಕಾರಣ ಲಾರಿ ಮಾಲೀಕರು, ಚಾಲಕರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ಅಷ್ಟೇ ಅಲ್ಲದೇ, ಕುಡಿಯಲು ನೀರಿಲ್ಲ, ಶೌಚಗೃಹ ವ್ಯವಸ್ಥೆ ಇಲ್ಲ, ವಿಶ್ರಾಂತಿ ಪಡೆಯಲು ಕೊಠಡಿ ಇಲ್ಲ. ಮಳೆ, ಬಿಸಿಲು, ಧೂಳಿನ ನಡುವೆ ಲಾರಿ ಮಾಲೀಕರು, ಚಾಲಕರು ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಇದ್ದು, ಹಲವು ಬಾರಿ ವಾಹನಗಳ ಬಿಡಿ ಭಾಗಗಳ ಕಳ್ಳತನವಾಗಿದೆ. ಶಾಶ್ವತ ನೆಲೆ ಒದಗಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗದೆ ಲಾರಿ ಮಾಲೀಕರು ಮತ್ತು ಚಾಲಕರು ದಾರಿ ಕಾಣದಂತಾಗಿದೆ.