ಹಾಸನ : ಚನ್ನರಾಯಪಟ್ಟಣ ತಾಲೂಕಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಏತ ನೀರಾವರಿ ಯೋಜನೆಯ ಗುತ್ತಿಗೆ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ನಿಯಮಿತ ಹಣ ಬಿಡುಗಡೆ ಮಾಡಿ ಅವರ ಜೇಬು ತುಂಬಿಸುವ ಸರ್ಕಾರ, ಯೋಜನೆಗಾಗಿ ಭೂಮಿ ನೀಡಿದ ರೈತರನ್ನು ಕಡೆಗಣಿಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಂ ಎ ಗೋಪಾಲಸ್ವಾಮಿ ಆರೋಪ ಮಾಡಿದರು.
ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಜುಟ್ಟನಹಳ್ಳಿ ಹಾಗೂ ಶ್ರವಣಬೆಳಗೊಳದ ನೀರಾವರಿ ಯೋಜನೆಯಡಿ ನಿರ್ಮಾಣವಾಗಿರುವ ಬಸವನಹಳ್ಳಿ ನೀರು ಸಂಗ್ರಹ ತೊಟ್ಟಿ ಮತ್ತು ಕಾಲುವೆ ಮೂಲಕ ಪರೀಕ್ಷಾರ್ಥ ನೀರು ಹರಿಯುತ್ತಿರುವ ಸ್ಥಳವನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದ ಬಳಿಕ ಅವರು ಮಾತನಾಡಿದರು.
ಯೋಜನೆಯ ಅನುಷ್ಠಾನ ವಿಚಾರದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಿರೀಸಾವೆ ಜುಟ್ಟನಹಳ್ಳಿ ಏತ ನೀರಾವರಿ ಯೋಜನೆಯಡಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರ ಹಿತಕಾಯುವ ಮೂಲಕ ಸರ್ಕಾರ, ಯಾವುದೇ ತಂಟೆ ತಕರಾರು ಮಾಡದೆ ಭೂಮಿ ನೀಡಿದ ರೈತರಿಗೆ ಹಣ ಸಂದಾಯ ಮಾಡುತ್ತಿಲ್ಲ.
ಇದು ರೈತರನ್ನು ಕೆರಳಿಸುವಂತೆ ಮಾಡಿದೆ. ತಾಲೂಕಿನಲ್ಲಿ ನಿರ್ವಹಿಸುತ್ತಿರುವ 5 ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ಸುಮಾರು 25 ಕೋಟಿ ರೂ. ಪರಿಹಾರ ನೀಡಬೇಕು. ಆದರೆ, ಗುತ್ತಿಗೆದಾರರಿಗೆ ಹಣ ನೀಡುವ ಮೊದಲು ರೈತರಿಗೆ ಪರಿಹಾರ ನೀಡುವಂತೆ ಎರಡು ದಿನಗಳ ಹಿಂದೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಇದನ್ನು ಮೀರಿ ಗುತ್ತಿಗೆದಾರರಿಗೆ ಹಣ ಸಂದಾಯ ಆಗುತ್ತಿರುವುದು ಕಂಡು ಬಂದಿದೆ. ಇದರ ವಿರುದ್ಧ ಹೇಮಾವತಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸೋಮವಾರದಿಂದ ನಡೆಯಲಿರುವ ಅಧಿವೇಶನದಲ್ಲಿ ಗುತ್ತಿಗೆದಾರನ ಹಿತಕ್ಕೆ ನಿಂತು ರೈತರನ್ನು ಕಡೆಗಣಿಸುತ್ತಿರುವ ಬಿಜೆಪಿ ಸರ್ಕಾರ ಎಷ್ಟು ಪರ್ಸೆಂಟ್ ಕಮಿಷನ್ ಪಡೆಯುತ್ತದೆ ಎಂಬುದರ ವಿರುದ್ಧ ಪ್ರಶ್ನೆ ಮಾಡಲಾಗುತ್ತೆ. ಜೊತೆಗೆ 5 ಏತ ನೀರಾವರಿ ಯೋಜನೆಗಾಗಿ ಬಳಸಿಕೊಳ್ಳಲಾಗಿರುವ ಭೂಮಿಯ ನೋಂದಣಿ ಕಾರ್ಯಕ್ಕಾಗಿ 7 ಕೋಟಿ ಹಣ ನೋಂದಣಿ ಶುಲ್ಕಕ್ಕಾಗಿ ನೀರಾವರಿ ಇಲಾಖೆಯ ಭರಿಸಬೇಕಾಗಿದೆ.
ಇದರಿಂದ ಯೋಜನೆಗೆ ಹಿನ್ನಡೆಯಾಗಲಿದೆ. ಆದ್ದರಿಂದ ಸರ್ಕಾರವೇ ಹಣ ಭರಿಸಬೇಕು. ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.