ಹಾಸನ: ರಾಜ್ಯದ ಬರ ವಿಚಾರದಲ್ಲಿ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್ ಎಫ್ ಮಾರ್ಗಸೂಚಿ ಇದ್ದು, ಬರ ನಿರ್ಧಾರದ ಬಗ್ಗೆ ಇರುವ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬದಲಾಯಿಸಬೇಕು. ಜಿಲ್ಲಾ ಮಂತ್ರಿ ಜಿಲ್ಲೆಗೆ ಬಂದು ಸಭೆ ಮಾಡಬೇಕಾಗಿತ್ತು. ಅವರು ಬರದ ಬಗ್ಗೆ ಮಾತನಾಡದೇ ಮೌನವಹಿಸಿದ್ದಾರೆ ಎಂದು ಅರಸೀಕೆರೆ ಕ್ಷೇತ್ರದ ಶಾಸಕ ಕೆ ಎಂ ಶಿವಲಿಂಗೇಗೌಡ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್ ಎಫ್ ಈ ಮಾರ್ಗಸೂಚಿಯಿಂದ ರೈತರಿಗೆ ಅನ್ಯಾಯ ಆಗುತ್ತಿದೆ. ಮಾರ್ಗಸೂಚಿಗಳನ್ನು ಬದಲಾವಣೆಗೆ ಮಾಡುವಂತೆ ಕಳೆದ ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ರೈತರು ಹೋರಾಟ ಮಾಡಿದ್ದರು. ಅಂದು ಹೋರಾಟ ಅಂತ್ಯಗೊಳಿಸುವಾಗ ಪ್ರಧಾನಿ ಮೋದಿಯವರು ಮಾರ್ಗಸೂಚಿ ಬದಲಾಯಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಈಗ ಅವರು ಕೊಟ್ಟ ಮಾತಿನಂತೆ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಕ್ಷೇತ್ರದಲ್ಲಿ ಮಳೆಕೊರತೆ ಇದೆ. ಏಪ್ರಿಲ್ನಿಂದ ಮೇವರೆಗೆ ಮಳೆಯೇ ಬಂದಿಲ್ಲ. ನಂತರ ಸ್ವಲ್ಪ ಮಳೆ ಬಂದು ಕೆಲ ಧಾನ್ಯಗಳ ಬಿತ್ತನೆ ಆಗಿತ್ತು. ಬಳಿಕ ಮಳೆ ಹೋಗಿ ಬೆಳೆ ನಾಶವಾಗಿದೆ. ರೈತರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ, 16 ಸಾವಿರ ಹೆಕ್ಟೇರ್‌ನಲ್ಲಿ ಉಳಿದ ಬೆಳೆ ಬಿತ್ತನೆ ಮಾಡಿದ್ದರು. ಆಗಸ್ಟ್ನಿಂದ ಇಲ್ಲಿಯವರೆಗೂ ಒಂದು ಹನಿ ಮಳೆ ಬಂದಿಲ್ಲ ಎಂದು ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ. ನಮ್ಮ ಇಡೀ ತಾಲ್ಲೂಕು ಬರದಿಂದ ಕೂಡಿದೆ. ಆದರೆ ಯಾವುದೋ ಮಾನದಂಡ ಇಟ್ಟುಕೊಂಡು ಮಳೆ ಆಗಿದೆ ಎಂದಿದ್ದಾರೆ ಎಂದು ಬರ ಪಟ್ಟಿಯಿಂದ ಅರಸೀಕೆರೆ ತಾಲ್ಲೂಕು ಕೈಬಿಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ತಾಲೂಕನ್ನು ಯಾಕೆ ಬರ ಎಂದು ತೀರ್ಮಾನ ಮಾಡಿಲ್ಲ. ಉಸ್ತುವಾರಿ ಸಚಿವರು ಜಿಲ್ಲೆಗೆ ಬರಬೇಕಿತ್ತು. ಸಭೆ ಮಾಡಬೇಕಿತ್ತು ಎಂದು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಶಿವಲಿಂಗೇಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನನ್ನ ಕ್ಷೇತ್ರದಲ್ಲಿ ಶೇಕಡಾ 33ಕ್ಕಿಂತ ಕಡಿಮೆ ಮಳೆ ಆಗಿದೆ. ಬರ ನಿರ್ಧಾರದ ಬಗ್ಗೆ ಇರುವ ಮಾರ್ಗಸೂಚಿ ಬದಲಾಗಬೇಕು. ಈ ಬಗ್ಗೆ ನಾಳೆ ಮಧ್ಯಾಹ್ನ 12 ಗಂಟೆಗೆ ಸಿಎಂರನ್ನು ಭೇಟಿ ಮಾಡಿ ನಮ್ಮ ಕ್ಷೇತ್ರವನ್ನು ಬರ ಎಂದು ಘೋಷಣೆ ಮಾಡಬೇಕು. ಜೊತೆಗೆ ತಮಿಳುನಾಡಿಗೆ ನೀರು ಹರಿಸಲು ನಮ್ಮ ವಿರೋಧವಿದೆ. ಅವರ ಪಾಲಿನ ನೀರನ್ನು ಬಿಟ್ಟಾಗಿದೆ. ಮತ್ತೆ ಒಂದಿಂಚು ನೀರು ಬಿಟ್ಟರೂ ವಿರೋಧ ಮಾಡ್ತೀವಿ. ಸರ್ವಪಕ್ಷ ಸಭೆ ಕರೆದು ನೀರು ಬಿಡಲ್ಲ ಎಂದು ತೀರ್ಮಾನ ಮಾಡಿ ಆಗಿದೆ. ಇದರ ಮೇಲೂ ನೀರು ಬಿಟ್ಟರೆ ವಿರೋಧವಿದೆ. ನಾವು ಖಂಡಿತಾ ಪ್ರತಿಭಟನೆ ಮಾಡುತ್ತೇವೆ ಎಂದು ಶಿವಲಿಂಗೇಗೌಡ ಹೇಳಿದರು.
ಇದನ್ನೂ ಓದಿ : 15 ದಿನಗಳವರೆಗೆ ಮಲಪ್ರಭಾ ಕುಡಿಯುವ ನೀರು ಬಿಡುಗಡೆಗೆ ನಿರ್ಧಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್