ಹಾಸನ: ಮಳೆ ಹಾಗೂ ಪ್ರವಾಹದಿಂದ ಧರೆಗುರುಳಿರುವ ಮನೆಗಳಿಗೆ ತಕ್ಷಣ ತಾತ್ಕಾಲಿಕವಾಗಿ 10 ಸಾವಿರ ರೂ ಪರಿಹಾರ ಮತ್ತು ಸಂಪೂರ್ಣವಾಗಿ ಮನೆಗಳು ಹಾಳಾಗಿದ್ದರೆ 5 ಲಕ್ಷ ರೂ ಪರಿಹಾರವನ್ನು ಕಳೆದ ವರ್ಷದಂತೆ ಈ ವರ್ಷವೂ ನೀಡಬೇಕೆಂದು ಆದೇಶಿಸಿರುವುದಾಗಿ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಅವರು ಮಾತನಾಡಿದರು. ಕಳೆದ ವರ್ಷ ಪರಿಹಾರ ಕಾರ್ಯದಲ್ಲಿ ಯಾವುದೇ ತೊಂದರೆ ಆಗಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ನಮ್ಮ ಗಮನಕ್ಕೆ ತಂದು ದಾಖಲಾತಿ ಒದಗಿಸಿದರೆ ತಕ್ಷಣ 10 ಸಾವಿರ ಪರಿಹಾರ ಕೊಡಿಸುವ ಪ್ರಯತ್ನ ಮಾಡುವೆ.
ಇನ್ನು ಪರಿಹಾರ ನೀಡುವ ಸಂದರ್ಭದಲ್ಲಿ ಹತ್ತು ಹಲವು ನಿಯಮಗಳನ್ನು ರೂಪಿಸುವುದರಿಂದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಫಲಾನುಭವಿಗಳಾಗುತ್ತಾರೆ. ಉಳಿದಂತೆ ಇತರರು ವಂಚಿತರಾಗುತ್ತಾರೆ ಎಂಬ ಜೆಡಿಎಸ್ ಆರೋಪಕ್ಕೆ ಈ ಬಾರಿ ಆ ರೀತಿ ಆಗುವುದಕ್ಕೆ ಬಿಡುವುದಿಲ್ಲ. ಈಗಾಗಲೆ ನಾನು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿರುವೆ. ಮಳೆಯಿಂದ ಹಾನಿಗೊಳಗಾದ ಕೃಷಿ ಭೂಮಿ ಮತ್ತು ಮಳೆಯಿಂದ ಕುಸಿದಿರುವ ಮನೆಗಳ ಮತ್ತು ಹಾನಿಗೊಳಗಾದ ಬೆಳೆಗಳ ಪೋಟೋ ಸಮೇತ ಅದಕ್ಕೆ ಪೂರಕವಾದ ದಾಖಲಾತಿಗಳನ್ನ ಒದಗಿಸಿದರೆ ಖಂಡಿತ ತಕ್ಷಣ ತರಿಹಾರ ನೀಡಲು ಸಿದ್ಧರಿದ್ದೇವೆ ಎಂದರು.
ಬೇಲೂರು, ಸಕಲೇಶಪುರ ಮತ್ತು ಅರಕಲಗೂಡು ತಾಲೂಕಿನಲ್ಲಿ ಉಂಟಾಗಿರುವ ಮಳೆ ನಷ್ಟ ಮತ್ತು ಪ್ರವಾಹದಿಂದ ಹಾನಿಗೊಳಗಾದ ನಷ್ಟವನ್ನ ಸರ್ವೇ ಕಾರ್ಯ ಮಾಡಲು ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ಭಾಗದಿಂದ ಕಂದಾಯ, ವಿದ್ಯುತ್, ಅರಣ್ಯ ಇಲಾಖೆಗಳ ಸಿಬ್ಬಂದಿಯನ್ನ ಕರೆಸಿ ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ. ಮತ್ತೆ ಮಳೆ ಬರುವ ಸಂಭವ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ, ಅನಾಹುತದ ಸಂದರ್ಭದಲ್ಲಿ ತಕ್ಷಣ ಅವರಿಗೆ ಪರಿಹಾರ ಮತ್ತು ತಾತ್ಕಾಲಿಕ ಪುನರ್ವಸತಿ ಕಲ್ಪಿಸಲು ಈಗಾಗಾಲೇ ಸೂಚನೆ ನೀಡಿರುವುದಾಗಿ ತಿಳಿಸಿದರು.