ಹಾಸನ: ನಗರ ಸಾರಿಗೆ ಬಸ್ನ ಸಮಸ್ಯೆ ಬಗೆಹರಿಸುವಂತೆ, ಕರ್ನಾಟಕ ರಾಜ್ಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಸಾಲಗಾಮೆ ಗೇಟ್ ಮಾರ್ಗದ ಸಂಚಾರದಲ್ಲಿ ಬಸ್ನ ಸಮಸ್ಯೆ ತುಂಬಾ ಇದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಸಾಲಗಾಮೆ ಗೇಟ್ ಹತ್ತಿರ ಸರ್ಕಾರಿ ವಿಜ್ಞಾನ ಕಾಲೇಜು, ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಗೃಹ ವಿಜ್ಞಾನ ಕಾಲೇಜುಗಳಿವೆ. ಒಟ್ಟು 12 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬಂದು ಹೋಗುತ್ತಾರೆ. ಪ್ರತಿನಿತ್ಯ ಬೆಳಗ್ಗೆ ಎಲ್ಲಾ ವಿದ್ಯಾರ್ಥಿಗಳು ಹೊಸ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಕಾಲೇಜಿಗೆ ತೆರಳಬೇಕಾಗಿದೆ. ಹೀಗಾಗಿ ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೂ ನಗರ ಸಾರಿಗೆ ಬಸ್ಗಳ ಸಂಖ್ಯೆ ಹೆಚ್ಚಳ ಮಾಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.
ತಕ್ಷಣವೇ ಬಸ್ಗಳ ಸಂಖ್ಯೆ ಹೆಚ್ಚಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಇನ್ನು ಬಸ್ನಲ್ಲಿ ಪ್ರಯಾಣಿಸುವಾಗ ಸಾರಿಗೆ ಸಿಬ್ಬಂದಿ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ಮಾತನಾಡುತ್ತಿದ್ದು, ಮರ್ಯಾದೆ ಕೊಟ್ಟು ಮಾತನಾಡಬೇಕು ಎಂದು ತಮ್ಮ ಅಳಲು ತೋಡಿಕೊಂಡರು. ನಗರ ಸಾರಿಗೆ ಬಸ್ಗಳು 10 ನಿಮಿಷಕ್ಕೊಮ್ಮೆ ಬರಬೇಕು ಎಂದು ಆಗ್ರಹಿಸಿದರು.