ಹಾಸನ: ಒಂದು ಕಡೆ ಪದವಿಯ ಮೊದಲ ಸೆಮಿಸ್ಟರ್ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆಯುತ್ತಿದ್ದರೆ, ಪಕ್ಕದಲ್ಲೇ ಈರುವ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ಮೈಕ್ನಲ್ಲಿ ನೀಡಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಸಾಲಗಾಮೆ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ 15 ದಿನಗಳಿಂದ ಪರೀಕ್ಷೆ ನಡೆಯುತ್ತಿದೆ. ಇನ್ನೊಂದೆಡೆ 10 ದಿನಗಳಿಂದ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ವಿವಿಧ ಶಾಲೆಗಳಿಗೆ ಹಾಗೂ ಬ್ಯಾಂಕಿನ ನೌಕರರಿಗೆ ಸೇರಿದಂತೆ ಖಾಸಗಿಯವರಿಗೆ ಕ್ರಿಕೆಟ್ ಪಂದ್ಯಾವಳಿ ನಡೆಸಲು ಅವಕಾಶ ಕೊಡಲಾಗಿದೆ.
ಇಲ್ಲಿ ಕ್ರಿಕೆಟ್ ಆಡುವುದರಿಂದಾಗಿ ಯಾವ ಸಮಸ್ಯೆ ತಲೆದೋರುವುದಿಲ್ಲ. ಆದರೆ ಮೈಕ್ನಲ್ಲಿ ಮಾತನಾಡಲು ಅವಕಾಶ ಕೊಟ್ಟಿರುವುದು ವಿರೋಧಕ್ಕೆ ಕಾರಣವಾಗಿದೆ. ಕ್ರಿಕೆಟ್ ಪಂದ್ಯಾವಳಿಗೆ ಅವಕಾಶ ಕೊಟ್ಟವರು ಕಾಲೇಜಿನ ಪ್ರಾಂಶುಪಾಲರು ಎಂದು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಕೆಲ ಉಪನ್ಯಾಸಕರು ದೂರಿದ್ದಾರೆ.