ಹಾಸನ: ವಿದ್ಯಾರ್ಥಿಗಳ ನಡುವಿನ ಮಾತಿನ ಸಮರ ಚಾಕುವಿನಿಂದ ಚುಚ್ಚುವ ಹಂತಕ್ಕೆ ತಾರಕ್ಕೇರಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಹಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಡಿ.31ರಂದು ಹಿಮ್ಸ್ ಕಾಲೇಜು ವಿದ್ಯಾರ್ಥಿಗಳ ಕೊಠಡಿಯಲ್ಲಿ ನೂತನ ವರ್ಷಾಚರಣೆ ಮಾಡುವ ವೇಳೆ ಮಾರುತಿ ಮತ್ತು ಶ್ರೀಕಾಂತ್ ಎಂಬ ಸಹಪಾಠಿಗಳ ನಡುವೆ ಜಗಳ ನಡೆದಿದೆ. ಇಬ್ಬರು ಕೈ-ಕೈ ಮಿಲಾಯಿಸಿದ್ದಾರೆ. ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಶಿವಮೊಗ್ಗ ಮೂಲದ ಮಾರುತಿ ಹಾಗೂ ಆತನ ಸಹಪಾಠಿ ಮಂಡ್ಯ ಮೂಲದ ಶ್ರೀಕಾಂತ್ ನಡುವೆ ಜಗಳ ನಡೆದಿದ್ದು, ಮಾತನಾಡುತ್ತಲೇ ಹೊಸ ವರ್ಷಕ್ಕೆ ಕೇಕ್ ಕತ್ತರಿಸಲು ತಂದಿದ್ದ ಚಾಕುವಿನಿಂದ ಏಕಾಏಕಿ ಮಾರುತಿಯ ಹೊಟ್ಟೆಗೆ ಚಾಕುವಿನಿಂದ ಚುಚ್ಚಿದ್ದು, ಮಾರುತಿ ಪ್ರತಿರೋಧ ಒಡ್ಡಲು ಮುಂದಾದಾಗ ಮತ್ತೊಮ್ಮೆ ಚಾಕುವಿನಿಂದ ಚುಚ್ಚಿದ್ದು, ಮಾರುತಿಯ ಸ್ಥಿತಿ ಗಂಭೀರವಾಗಿದೆ. ಆತನನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಚಾಕುವಿನಿಂದ ಇರಿದ ಶ್ರೀಕಾಂತ್ ಮೇಲೆ ಸಿಟ್ಟಾದ ಸ್ಥಳದಲ್ಲಿದ್ದ ಸಹಪಾಠಿಗಳು ಆತನ ಕೈಯಲ್ಲಿದ್ದ ಚಾಕುವನ್ನ ಕಿತ್ತುಕೊಂಡು ಆತನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದು, ಆತನ ಕಾಲಿಗೂ ಪೆಟ್ಟಾಗಿದ್ದು, ಆತನನ್ನ ಕೂಡಾ ಚಿಕಿತ್ಸೆಗೆ ಒಳಪಡಿಸಲಾಗಿದೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.