ಹಾಸನ: ಮನುಷ್ಯನಿಗೆ ಕ್ರೀಡೆ ಎಂಬುದು ಕೇವಲ ಆಟೋಟವಲ್ಲ ಜೊತೆಯಲ್ಲಿ ಮನಸ್ಸಿಗೆ ನೆಮ್ಮದಿ, ಶಾಂತಿ ಜೊತೆಗೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ ಎಂದು ಕ್ಷೇತ್ರಿಯ ರಾಜ್ಯ ಸಮಿತಿ ಸಂಯೋಜಕರಾದ ಚಂದ್ರಶೇಖರ್ ಜಾಗಿರ್ ದಾಸ್ ತಿಳಿಸಿದರು.
ನಗರದ ತಣ್ಣೀರುಹಳ್ಳದ ಬಳಿ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕ್ರೀಡಾ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್ ಉದ್ಘಾಟಿಸಿ ಮಾತನಾಡಿ, ಕ್ರೀಡಾ ಭಾರತೀ ಹೆಸರಿನಲ್ಲಿ ವಿವಿಧ ಕ್ರೀಡೆಯನ್ನು ಆಯೋಜಿಸುವ ಮೂಲಕ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಕ್ರೀಡಾಪಟುಗಳಲ್ಲದವರು ಕೂಡ ಸದಸ್ಯರಾಗಿ ಕೆಲಸ ಮಾಡುವ ಅವಕಾಶವನ್ನು ಸಂಘದಲ್ಲಿ ಕಲ್ಪಿಸಲಾಗುತ್ತದೆ. ಕ್ರೀಡೆ ಎಂದರೇ ಏನು ಎಂಬುದರ ಬಗ್ಗೆ ವಿದ್ಯಾರ್ಥಿಗಳ ಜೊತೆ ಜೊತೆಯಲ್ಲಿ ಪೋಷಕರಿಗೆ ಮಾಹಿತಿ ಕೊಡಬೇಕು ಎಂದು ಕಿವಿಮಾತು ಹೇಳಿದರು.
ಕ್ರೀಡೆ ಎಂಬುದು ಮನಸ್ಸಿಗೆ ನೆಮ್ಮದಿ, ಶಾಂತಿ ಕೊಡುವುದುರ ಜೊತೆಗೆ ದೈಹಿಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ ವೃದ್ಧಿಸುತ್ತದೆ. ಎಲ್ಲಾ ವಿಚಾರವನ್ನು ತಿಳಿಸಿ ಜನರಲ್ಲಿ ಜಾಗೃತಿ ಮೂಡಿಸಲು ಕ್ರೀಡಾ ಭಾರತೀ ಸಂಘಟನೆ ವಿಸ್ತಾರವಾಗಬೇಕು. ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಗ್ರಾಮ, ಹೋಬಳಿ ಮಟ್ಟದಲ್ಲಿ ಸಮಿತಿ ರಚನೆ ಮಾಡಲು ಸಲಹೆ ನೀಡಿದರು. ಕ್ರೀಡಾ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್ ನಲ್ಲಿ ಮಂಗಳೂರು, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಆಯಾ ತಾಲೂಕು ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಈಸಂದರ್ಭದಲ್ಲಿ ಕ್ರೀಡಾ ಭಾರತೀಯ ಸಂಘಟನೆಯ ಉದ್ದೇಶ, ರೂಪರೇಶದ ಬಗ್ಗೆ ತಿಳಿಸಲಾಯಿತು. ವಿವಿಧ ಜಿಲ್ಲೆಗಳಿಂದ ಸಭೆಗೆ ಆಗಮಿಸಿದ್ದ ಪದಾಧಿಕಾರಿಗಳ ಪರಿಚಯ ಮಾಡಿಕೊಂಡರು. ಇದಕ್ಕೆ ಮೊದಲು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಗ್ಗ-ಜಗ್ಗಾಟ ಸೇರಿದಂತೆ ವಿವಿಧ ಕ್ರೀಡೆಗಳನ್ನು ಸಾರ್ವಜನಿಕರಿಂದ ಆಡಿಸಿ ಸ್ಥಳದಲ್ಲಿಯೇ ಬಹುಮಾನ ವಿತರಿಸಲಾಯಿತು.