ಹಾಸನ: ವ್ಯಕ್ತಿತ್ವ ವಿಕಸನಕ್ಕೆ ಪಠ್ಯದಷ್ಟೇ ಕ್ರೀಡೆಗಳು ಸಹ ಮಹತ್ವವಾಗಿದ್ದು, ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಕುರಿತು ಆಸಕ್ತಿ ಮೂಡಿಸುವುದು ಅವಶ್ಯಕ. ಹಾಗಾಗಿಯೇ ಅರಸೀಕೆರೆ ತಾಲೂಕಿನ ಅರಕೆರೆ ಗ್ರಾಮದಲ್ಲಿ ಸಮಾನ ವಯಸ್ಕರ ತಂಡಗಳನ್ನು ಮಾಡಿ, ತ್ರೋಬಾಲ್, ಕಬಡ್ಡಿ, ಚಿನ್ನಿದಾಂಡು, ಖೋ ಖೋ ಕ್ರೀಡೆಗಳ ತರಬೇತಿ ನೀಡಲಾಗುತ್ತಿದೆ.
ಅರಕೆರೆ ಯೂತ್ ಬಾಯ್ಸ್ ಎಂಬ ಹೆಸರಿನಲ್ಲಿ ಈಗಾಗಲೇ ಸಂಘಟಿತರಾಗಿ ಇರುವ ಯುವಕರ ತಂಡ ಪ್ರತಿನಿತ್ಯ ಪ್ರೌಢಶಾಲೆ ಆವರಣದಲ್ಲಿ ವಾಲಿಬಾಲ್, ಕಬಡ್ಡಿ, ಚಿನ್ನಿದಾಂಡು, ಖೋ ಖೋ ಮುಂತಾದ ಆಟಗಳನ್ನು ದಿನ ಬಿಟ್ಟು ದಿನ ಆಟಡ್ತಾರೆ. ಮುಂಜಾನೆಯಿಂದ ಸಂಜೆ ತನಕ ತಮ್ಮ ಜಮೀನಿನಲ್ಲಿ ಕೆಲಸ ಮಾಡಿ ಬಂದ ರೈತಾಪಿ ವರ್ಗಕ್ಕೆ ಇವರು ಆಡುವ ಆಟಗಳು ಸಂಜೆವರೆಗೆ ಮನರಂಜನೆ ನೀಡುತ್ತವೆ. ಹೀಗಾಗಿ ಕೆಲವೊತ್ತು ಮೈಮರೆತು ಆಟವನ್ನು ನೋಡುವ ಮೂಲಕ ಮನೆಗೆ ತೆರಳುತ್ತಾರೆ.
ಹೀಗಾಗಿಯೇ ಮಕ್ಕಳು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಮೂಲಕ ಗ್ರಾಮೀಣ ಆಟಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಅವಕಾಶ ಸಿಗುವುದಷ್ಟೆ ಅಲ್ಲದೆ, ದೇಹದ ಆರೋಗ್ಯ ಕಾಪಾಡುವಲ್ಲಿ ಹೆಚ್ಚು ಸಹಕಾರಿ ಆಗಿದೆ ಎನ್ನುತ್ತಾರೆ ಶ್ರೀ ಬಸವೇಶ್ವರ ಪ್ರೌಢ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮಹಾಲಿಂಗಪ್ಪ.