ಹಾಸನ: ಬೀದಿಬದಿ ವ್ಯಾಪಾರಿಗಳಿಗೆ ಧನಸಹಾಯ ಮತ್ತು ಬಡವರ ಸಾಲ ಮನ್ನಾ ಕುರಿತು ಅಧಿಕೃತ ಆದೇಶ ಹೊರಡಿಸುವಂತೆ ಆಗ್ರಹಿಸಿ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಭಾರತದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೊರೊನಾ ವೈರಸ್ ಎಂಬ ಮಹಾಮಾರಿ ಹರಡಿ ರಾಜ್ಯ ಸಂಪೂರ್ಣ ಲಾಕ್ಡೌನ್ ಆಗಿದೆ. ಇದರಿಂದ ಎಲ್ಲಾ ತರಹದ ವ್ಯಾಪಾರ ವಹಿವಾಟು ಬಂದ್ ಆಗಿವೆ. ರಾಜ್ಯ ಸರಕಾರವು ಎಲ್ಲಾ ಬಡ ವರ್ಗದ ರೈತರು, ಅಸಂಘಟಿತ ಕಾರ್ಮಿಕರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಟ್ಯಾಕ್ಸಿ ಮತ್ತು ಆಟೋ ಚಾಲಕರು, ಸವಿತಾ ಸಮಾಜದ ಕ್ಷೌರಿಕರು ಮತ್ತು ಹೂವು ಬೆಳೆಯುವ ರೈತರಿಗೆ ಸುಮಾರು 1610 ಕೋಟಿಗಳ ಬೃಹತ್ ಪ್ಯಾಕೇಜ್ ಘೋಷಣೆ ಮಾಡಿರುವುದು ಸ್ವಾಗತರ್ಹವಾಗಿದೆ.
ಇದೆ ರೀತಿ ಬೀದಿಬದಿ ವ್ಯಾಪಾರಿಗಳು ಕೂಡ ಅಸಂಘಟಿತ ಕಾರ್ಮಿಕರು. ಎಲ್ಲಾ ವರ್ಗದ ಬೀದಿಬದಿ ವ್ಯಾಪಾರಸ್ಥರು ಲಾಕ್ಡೌನ್ ಆದೇಶದಿಂದ ಇಲ್ಲಿವರೆಗೂ ಇಡೀ ರಾಜ್ಯದಲ್ಲಿ ಶೇ. 15ರಷ್ಟು ಮಂದಿ ಮಾತ್ರ ಸರಕಾರ ಹಾಗೂ ಜಿಲ್ಲಾಡಳಿತ ಸೂಚಿಸಿರುವ ಮಾರ್ಗಸೂಚಿ ಪ್ರಕಾರ ವಾರಕ್ಕೆ ಮೂರು ದಿವಸ ವ್ಯಾಪಾರ ವಹಿವಾಟು ನಡೆಸಿದ್ದೇವೆ ಎಂದರು. ಕೇವಲ ಎರಡೊತ್ತು ಊಟಕ್ಕೆ ಮಾತ್ರ ಈ ವ್ಯಾಪಾರ ಸಾಕಾಗಿದೆ. ಇನ್ನುಳಿದ ಶೇ. 8.5ರಷ್ಟು ವ್ಯಾಪಾರಸ್ಥರು ವ್ಯಾಪಾರ ಮಾಡದೇ ತಮ್ಮ ನೋವನ್ನು ಯಾರ ಜೊತೆ ಹಂಚಿಕೊಳ್ಳದೇ ಅಸಹಾಯಕರಾಗಿ ಕೈಚಲ್ಲಿ ಕುಳಿತಿದ್ದಾರೆ.
ಹೂವು, ಹಣ್ಣು, ತರಕಾರಿ ಇತರೆ ವ್ಯಾಪಾರಸ್ಥರು ಬೆಳಗಿನಿಂದ ಸಂಜೆವರೆಗೂ ವ್ಯಾಪಾರ ಮಾಡಿ ಸಗಟು ಮಾರಾಟಗಾರ ಮಾಲೀಕರಿಗೆ ಹಣ ಕೊಡುವವರು ಇದ್ದಾರೆ. ಇವರ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ಕಡೆ ಜೀವನ ಹಾಗೂ ಸಂಸಾರ ನಿರ್ವಹಣೆ ಮತ್ತೊಂದು ಕಡೆ ಕೈಲಿ ಹಣವಿಲ್ಲದೇ ಬಂಡವಾಳ ಹೂಡಲು ಕಷ್ಟ ಸಾಧ್ಯವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.