ಅರಕಲಗೂಡು : ಅರುಣಾಚಲ ಪ್ರದೇಶದಲ್ಲಿ ಮಿಲಿಟರಿ ಸಾಮಗ್ರಿ ಸಾಗಿಸುವಾಗ ಗುಡ್ಡ ಕುಸಿದು ಮೃತಪಟ್ಟ ಭಾರತೀಯ ಯೋಧ ಮಲ್ಲೇಶ್ ಅವರ ಪಾರ್ಥಿವ ಶರೀರ ಹಾಸನದ ಸ್ವಗ್ರಾಮಕ್ಕೆ ಆಗಮಿಸಿದೆ. ಇದೀಗ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಯೋಧ ಮಲ್ಲೇಶ್ ಅವರು ಜಿಲ್ಲೆಯ ಅರಕಲಗೂಡು ತಾಲೂಕಿನ ಅತ್ನಿ ಗ್ರಾಮದವರು. ಇವರು ಅರುಣಾಚಲ ಪ್ರದೇಶದ ಬೆಟಾಲಿಯನ್ 18ರಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಿಲಿಟರಿ ಸಾಮಗ್ರಿಗಳನ್ನು ಗಡಿ ಭಾಗಕ್ಕೆ ಸಾಗಿಸುವಾಗ ಗುಡ್ಡ ಕುಸಿದು ಮಲ್ಲೇಶ್ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಿಲಿಟರಿ ಆಸ್ಪತ್ರೆಗೆ ಸೇರಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದರು.
ಮಲ್ಲೇಶ್ ಸೇನೆ ಸೇವಾ ಅವಧಿ ಮುಗಿದಿದ್ರೂ ದೇಶ ಸೇವೆ ಹಂಬಲದಲ್ಲಿ ಕೆಲಸ ಮುಂದುವರಿಸಿದ್ದರು. ಇಂದು ಸ್ವಗ್ರಾಮಕ್ಕೆ ಯೋಧ ಮಲ್ಲೇಶ್ ಪಾರ್ಥಿವ ಶರೀರ ಆಗಮಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಮಲ್ಲೇಶ್ ಅವರ ಅಂತಿಮ ದರ್ಶನ ಪಡೆಯಲು ಮೃತರ ಸಂಬಂಧಿಕರು, ಮಿತ್ರರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಅವರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮಿಲಿಟರಿ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಶಾಸಕ ಎ ಟಿ ರಾಮಸ್ವಾಮಿ, ಉಪ ವಿಭಾಗಧಿಕಾರಿ ಗಿರೀಶ್, ತಹಶೀಲ್ದಾರ್ ರೇಣುಕುಮಾರ್ ಹಾಜರಿದ್ದರು.