ಹಾಸನ: ತಮಿಳುನಾಡು ಮತ್ತು ಕರ್ನಾಟಕದಲ್ಲಿ ನೀರಾವರಿ ಹೋರಾಟಗಳು ಹೊಸದೇನಲ್ಲ. ಯಾವುದೇ ಒಂದು ಜಲಾಶಯ ನಿರ್ಮಾಣ ಮಾಡಿದ್ರೂ ಅದನ್ನು ಒಬ್ಬರೇ ಉಪಯೋಗಿಸಲು ಸಾಧ್ಯವಿಲ್ಲ. ಹೀಗಾಗಿ, ತಮಿಳುನಾಡಿಗೆ ಕೊಡಬೇಕಾದ ನೀರನ್ನು ನಾವು ಕೊಟ್ಟೇ ಕೊಡುತ್ತೇವೆ. ಅದರ ಜೊತೆಗೆ ಮೇಕೆದಾಟು ಯೋಜನೆಯನ್ನು ಕೇಂದ್ರ ಸರ್ಕಾರದ ಮೂಲಕ ಪೂರ್ಣಗೊಳಿಸುತ್ತೇವೆ ಎಂದು ನೂತನ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಎರಡು ದಿನದಿಂದ ಕರ್ನಾಟಕ ಪ್ರವಾಸ ಕೈಗೊಂಡಿರುವ ಸಚಿವೆ ಶೋಭಾ ಕರಂದ್ಲಾಜೆ ಇಂದು ಮೈಸೂರಿನಿಂದ ಹಾಸನದ ಗಡಿ ಭಾಗಕ್ಕೆ ಆಗಮಿಸಿದ ವೇಳೆ ಹೊಳೆನರಸೀಪುರದ ದೊಡ್ಡಹಳ್ಳಿಯಲ್ಲಿ ಈಟಿವಿ ಭಾರತದ ಪ್ರತಿನಿಧಿ ಜೊತೆ ಮಾತನಾಡಿದರು. ಕಾವೇರಿ ನ್ಯಾಯಾಧಿಕರಣದಿಂದ ಎರಡು ರಾಜ್ಯಗಳಿಗೆ ಹಂಚಿಕೆಯಾಗಬೇಕಾದ ನೀರನ್ನು ಈಗಾಗಲೇ ನಮ್ಮ ಸರ್ಕಾರವಿಲ್ಲದಿದ್ದಾಗಲೂ ನೀಡಿದೆ, ಆದರೆ ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೋಗುವಂತಹ ನೀರು ನಿಂತು ಹೋಗತ್ತದೆ ಎಂದು ಹೇಳುವುದರಲ್ಲಿ ಹುರುಳಿಲ್ಲ.
ತಮಿಳುನಾಡು ರೈತರು ಆತಂಕ ಪಡುವ ಅಗತ್ಯವಿಲ್ಲ:
ಯೋಜನೆಯಿಂದ ತಮಿಳುನಾಡು ರೈತರು ಆತಂಕ ಪಡುವ ಅಗತ್ಯವೂ ಇಲ್ಲ. ಆದರೆ ಇಂತಹ ಸಣ್ಣ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವುದು ಸರಿಯಲ್ಲ. ಹಾಗಾಗಿ ಎರಡು ರಾಜ್ಯಗಳು ಇದಕ್ಕೆ ಸಹಮತ ಕೊಡಬೇಕು ಎಂದು ಮನವಿ ಮಾಡಿದ್ರು.
ಇಸ್ರೇಲ್ ಮಾದರಿಯ ಕೃಷಿ ಲಾಭದಾಯಕ:
ಇನ್ನು ದೇಶದಲ್ಲಿ ಕೋವಿಡ್ ಹಿನ್ನೆಲೆ, ಸಂಕಷ್ಟದಲ್ಲಿರುವ ರೈತರಿಗೆ ಇಸ್ರೇಲ್ ಮಾದರಿಯ ಕೃಷಿ ಲಾಭದಾಯಕವಾಗುತ್ತದೆ. ಕ್ರಿಮಿ ಕೀಟ ತಡೆಗಟ್ಟುವ ಮೂಲಕ ಹೆಚ್ಚು ಇಳುವರಿ ನೀಡುವ ಮಾದರಿಯಾಗಿದ್ದು, ಇದನ್ನು ನಮ್ಮ ಇಲಾಖೆಯ ಮೂಲಕವೇ ಇದಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಲಾಗುವುದು. ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಣ್ಣ ಮತ್ತು ಮಧ್ಯಮ ರೈತರಿಗೆ 10 ಸಾವಿರ ರೂ. ಧನ ಸಹಾಯ ನೀಡುತ್ತಿದ್ದು, ಇದು ನಮ್ಮ ಸರ್ಕಾರ ರೈತರ ಬೆನ್ನೆಲುಬಾಗಿ ನಿಂತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.
ರೈತರನ್ನು ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ:
ಕೇಂದ್ರದ ಯೋಜನೆಯ ಕೆಲವು ಹೆಸರುಗಳನ್ನು ಮತ್ತು ಕೇಂದ್ರದ ಹಣವನ್ನು ಬಳಸಿಕೊಂಡು ಕಾಂಗ್ರೆಸ್ ಸರ್ಕಾರ ತನ್ನದೆಂದು ಹೇಳಿಕೊಂಡು ಭಾಗ್ಯ ಹೆಸರಲ್ಲಿ ರೈತರಿಗೆ ದಾರಿ ತಪ್ಪಿಸಿದೆ. ಆದರೆ ಮೋದಿಯವರ ಸಂಕಲ್ಪವನ್ನು ನಾನು ಪ್ರತಿ ರೈತರ ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ. ಇದು ನಮ್ಮ ಮುಂದಿರುವ ಸವಾಲು. ಇದರ ಬಗ್ಗೆ ರಾಜ್ಯ ಸರ್ಕಾರ ಮತ್ತು ಕೃಷಿ ಸಚಿವರೊಂದಿಗೆ ಆ. 27ರಂದು ಸಭೆ ಮಾಡಿ ಚರ್ಚಿಸಲಾಗುವುದು ಎಂದರು.
ಇದನ್ನೂ ಓದಿ: ರಾಜ್ಯದಲ್ಲಿರುವುದು ಅನೈತಿಕ ಸರ್ಕಾರ : ರಂದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ
ಇನ್ನು ಹಾಸನದಲ್ಲಿ ಆಲೂಗೆಡ್ಡೆ ಸಮಸ್ಯೆ, ಚಿಕ್ಕಮಗಳೂರು ಮತ್ತು ಕೊಡಗು ಭಾಗದಲ್ಲಿ ಕಾಫಿ ಸಮಸ್ಯೆಯಿರುವ ರೀತಿ ರಾಜ್ಯದ ವಿವಿಧ ಭಾಗಗಳಲ್ಲಿ ಕೆಲವು ಕೃಷಿಗೆ ಸಂಬಂಧಪಟ್ಟ ಸಮಸ್ಯೆಗಳಿವೆ. ಅದನ್ನು ಅರಿತು ನಾವು ಅವರಿಗೆ ನೆರವು ನೀಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.