ಹಾಸನ: ಎಸ್‌ಬಿಐ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಕದ್ದು ಆ ಜಾಗದಲ್ಲಿ ನಕಲಿ ಆಭರಣಗಳನ್ನಿಟ್ಟಿದ್ದ ಆರೋಪಿತ ಬ್ಯಾಂಕ್ ಸಿಬ್ಬಂದಿಯನ್ನು ಕೊಣನೂರು ಪೊಲೀಸರು ಬಂಧಿಸಿದ್ದಾರೆ. ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಬೆಳವಾಡಿ ಗ್ರಾಮದ ನಿವಾಸಿ ಲವ ಬಂಧಿತ ಆರೋಪಿ.
ಈತ ಇದೇ ಗ್ರಾಮದಲ್ಲಿರುವ ಎಸ್‌ಬಿಐ ಬ್ಯಾಂಕಿನಲ್ಲಿ ಹೊರಗುತ್ತಿಗೆಯ ಮೇಲೆ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಚಿನ್ನವನ್ನು ಅಡಮಾನವಿಟ್ಟು ಸಾಲ ಪಡೆಯುವ ಗ್ರಾಹಕರ ಅಸಲಿ ಚಿನ್ನವನ್ನು ಅದೇ ರೀತಿ ನಕಲಿ ಮಾಡಿಸಿ ಅದಲು ಬದಲು ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದನಂತೆ. 23 ಮೇ 2023ರಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ಬೇರೆಡೆಗೆ ವರ್ಗಾವಣೆಯಾಗಿದ್ದು, ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಚಿನ್ನದ ಪ್ಯಾಕ್ಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ, 30 ಚಿನ್ನದ ಪ್ಯಾಕ್ಗಳ ಚಿನ್ನದಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಈ ಬಗ್ಗೆ ಬ್ಯಾಂಕ್ ಅಧಿಕಾರಿ ಟಿ. ಅನುರಾಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿ ಲವ ಎಂಬಾತನಿಂದ 77 ಲಕ್ಷ ಮೌಲ್ಯದ 1,417 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವೀಲಿಂಗ್- 26ಕ್ಕಿಂತ ಹೆಚ್ಚು ದ್ವಿಚಕ್ರ ವಾಹನ ವಶ: ಕಳೆದ ನಾಲ್ಕೈದು ದಿನಗಳಲ್ಲಿ ಹಾಸನದಲ್ಲಿ ಬೈಕ್ ವೀಲಿಂಗ್ ಮತ್ತು ಬೈಕ್ಗಳಲ್ಲಿ ಕರ್ಕಶ ಶಬ್ದ ಉಂಟುಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದವರ ಸುಮಾರು 26ಕ್ಕಿಂತ ಹೆಚ್ಚು ದ್ವಿಚಕ್ರ ವಾಹನ ವಶಪಡಿಸಿಕೊಂಡು ಅವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾತನಾಡಿದ ಅವರು "ಕೆಲ ದಿನಗಳ ಕಾರ್ಯಚರಣೆಯಲ್ಲಿ 11 ಜನ ವೀಲಿಂಗ್ ಮಾಡುವವರನ್ನು ಮತ್ತು ದ್ವಿಚಕ್ರ ವಾಹನಗಳಲ್ಲಿ ಕರ್ಕಶ ಶಬ್ಧ ಮಾಡುವ ಸೈಲೆನ್ಸರ್ಗಳನ್ನು ವಶಪಡಿಸಿಕೊಂಡಿದಲ್ಲದೇ ಅವರ ಪೋಷಕರನ್ನು ಕರೆಯಿಸಿ ವಾರ್ನಿಂಗ್ ಮಾಡಲಾಗಿದೆ. ಈ ಪುಂಡರು ಆಗಾಗ ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ ಗ್ರೂಪ್ಗಳಿಗೆ ವೀಲಿಂಗ್ ಮಾಡುವ ವಿಡಿಯೋ ಚಿತ್ರೀಕರಿಸಿ ಪೋಸ್ಟ್ ಮಾಡುತ್ತಿದ್ದರು. ಅವರನ್ನು ಗುರುತಿಸಿ ಪ್ರಕರಣ ದಾಖಲಿಸಿ ದಂಡ ಹಾಕಲಾಗಿದೆ" ಎಂದು ತಿಳಿಸಿದರು.
ಇವರಲ್ಲಿ ಮೂವರು ಅಪ್ರಾಪ್ತರಾಗಿದ್ದು, ಇವರೆಲ್ಲರ ಪೋಷಕರ ಮೇಲೆಯೂ ಕೇಸ್ ದಾಖಲಿಸುತ್ತೇವೆ. ಈಗ 26 ಬೈಕ್ಗಳ ಸೀಜ್ ಮಾಡಲಾಗಿದೆ. ನಾಗರಕಟ್ಟೆ ಬಾವಿ ರಸ್ತೆ ಬಳಿ ಒಂದು ವಿಡಿಯೋ ನಮಗೆ ಬಂದಿದ್ದು, ಅದರಲ್ಲಿ ಮೂವರು ಹುಡುಗರು ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ ಮಾತನಾಡುತ್ತಿರುವ ಬಗ್ಗೆಯೂ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಆ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ವೀಲಿಂಗ್ ಮಾಡುವ ವೇಳೆ ಪೊಲೀಸರು ಹಿಂಬಾಲಿಸಿದರೆ ದೊಡ್ಡ ಅಪಾಯ ಬರಬಹುದು. ವೀಲಿಂಗ್ ಏನಾದರೂ ಕಂಡು ಬಂದರೇ ಆತನ ಫೋಟೊ ಇಲ್ಲವೇ ವಿಡಿಯೋವನ್ನು ಚಿತ್ರಿಕರಿಸಿ ತಕ್ಷಣ ನಮಗೆ ಇಲ್ಲವೇ ಸಂಬಂಧ ಪಟ್ಟ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕಳುಹಿಸಿಕೊಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಶಾಲಾ ಕಾಲೇಜು ಪ್ರಾರಂಭವಾಗಿರುವುದರಿಂದ ಈ ಪುಂಡರು ಬೈಕ್ ಮೂಲಕ ಪ್ರದರ್ಶನ ಮಾಡಲಿದ್ದಾರೆ. ಶೀಘ್ರದಲ್ಲಿಯೇ ವೀಲಿಂಗ್ ಮತ್ತು ಕರ್ಕಶ ಸೈಲೆನ್ಸರ್ ಬಳಕೆ ಮಾಡುವರನ್ನು ಗುರುತಿಸಿ ಅವರ ಮೇಲೆ ಕೇಸ್ ದಾಖಲಿಸಿ ಪುಂಡರ ಓಡಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.
ಟ್ರಾಫಿಕ್ ಸುಧಾರಣೆಯಲ್ಲಿ ಕೆಲ ನಿರ್ಧಾರ ಕೈಗೊಳ್ಳಲಾಗಿದೆ. ಸಿಟಿ, ರೂರಲ್, ಪೆನ್ಷನ್ ಪೊಲೀಸ್ ಠಾಣೆ ಹಾಗೂ ಬಡಾವಣೆ ಪೊಲೀಸ್ ಠಾಣೆ ಸೇರಿ ನಾಲ್ಕು ಪೊಲೀಸ್ ಠಾಣೆಯಿಂದ ನಾಲ್ಕು ಜನ ಸಿಬ್ಬಂದಿಗೆ ಬಿಳಿ ಪೊಲೀಸ್ ವಸ್ತ್ರ ಹಾಕಿ ಬೆಳಗ್ಗೆ 8 ರಿಂದ 11 ಗಂಟೆ, ಸಂಜೆ 4 ರಿಂದ ರಾತ್ರಿ 9ರ ವರೆಗೂ ಟ್ರಾಫಿಕ್ ಡ್ಯೂಟಿ ಎಂದು ನೇಮಕ ಮಾಡಲಾಗುವುದು. ಇದರಿಂದ ಟ್ರಾಫಿಕ್ ಸಮಸ್ಯೆ ಬಗೆಹರಿಸಲಾಗುವುದು ಎಂದು ಮಾಹಿತಿ ಅವರು ನೀಡಿದರು.
ಇದನ್ನು ಓದಿ: ಇನ್ಮುಂದೆ ರಸ್ತೆಯಲ್ಲಿ ವೀಲಿಂಗ್ ಮಾಡಿದ್ರೆ ಹುಷಾರು! ಸಂಚಾರಿ ಪೊಲೀಸರಿಂದ ಕಠಿಣ ಕ್ರಮ