ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನ, ಮುದುಡಿ ಗ್ರಾಮದ ಸುತ್ತಮುತ್ತ ಚಿನ್ನದ ಗಣಿಯಿದೆ ಎಂಬ ಮಾಹಿತಿ ಹರಿದಾಡುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ. 8-9 ಗ್ರಾಮಗಳ ಸರಹದ್ದಿನಲ್ಲಿ ಚಿನ್ನದ ನಿಕ್ಷೇಪವಿದೆ. ಹೀಗಾಗಿ ಇಲ್ಲಿ ಯಾವಾಗ ಬೇಕಾದರೂ ಚಿನ್ನದ ಗಣಿಗಾರಿಕೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗ್ತಿದ್ದು, ಇದು ರೈತರ ನಿದ್ದೆಗೆಡಿಸಿದೆ.
ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ಕಳೆದ ಮೂರು ತಿಂಗಳಿಂದಲೂ ಕೆಲವು ಅಧಿಕಾರಿಗಳು ಸ್ಥಳಕ್ಕೆ ಬಂದು ಸರ್ವೆ ಕಾರ್ಯ ಮಾಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಈ ಭಾಗದಲ್ಲಿ ಪ್ರತಿನಿತ್ಯ ಹೆಲಿಕಾಪ್ಟರ್‌ಗಳು ತಳಮಟ್ಟದಲ್ಲಿ ಹಾರಾಟ ನಡೆಸಿದ್ದವು. ರೈತರ ಭೂಮಿಯಲ್ಲಿ ಅಲ್ಲಲ್ಲಿ ಕೊಳವೆಬಾವಿ ರೀತಿ ಕೊರೆದು ಮಣ್ಣನ್ನೂ ಕೂಡ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರಂತೆ. ಹೀಗಾಗಿ ಚಿನ್ನದ ನಿಕ್ಷೇಪಕ್ಕೆ ನಾವೆಲ್ಲಿ ಜಮೀನು ಕಳೆದುಕೊಳ್ಳಬೇಕಾಗುತ್ತೋ ಎಂದು ಜನರು ಆತಂಕಕ್ಕೊಳಗಾಗಿದ್ದಾರೆ.
ನಮಗೆ ಇರುವುದೇ ಅಲ್ಪ-ಸ್ವಲ್ಪ ಜಮೀನು, ಕೃಷಿಯೇ ಜೀವಾನಾಧಾರ. ನಮಗೆ ಚಿನ್ನಕ್ಕಿಂತ ಅನ್ನಕೊಡುವ ಚಿನ್ನದಂಥ ಭೂಮಿಯೇ ಮುಖ್ಯ. ಹೀಗಾಗಿ ಇಲ್ಲಿ ಒಂದು ವೇಳೆ ಚಿನ್ನ ಇದ್ದರೂ ನಾವು ಚಿನ್ನದ ಗಣಿಗಾರಿಕೆಗೆ ತಮ್ಮ ಭೂಮಿ ಮಾತ್ರ ಕೊಡಲ್ಲ ಅಂತಿದ್ದಾರೆ ಗ್ರಾಮಸ್ಥರು.
ಈ ಜಾಗದಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಯಾವ ಅಧಿಕಾರಿಗಳು ಇದುವರೆಗೂ ಅಧಿಕೃತ ಮಾಹಿತಿ ನೀಡಿಲ್ಲ. ಗ್ರಾಮಸ್ಥರು ತಾಲೂಕು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರಂತೆ.
ಮುದುಡಿ ಗ್ರಾಮದ ಸುತ್ತಮುತ್ತಲಿನ ಸಿದ್ದಾಪುರ, ಬಿಸಲೇಹಳ್ಳಿ, ಮುದುಡಿ ತಾಂಡ, ಹಲಗೇನಹಳ್ಳಿ, ವೆಂಕಟಾಪುರ ಕಾವಲು, ಶಂಕರಪುರ, ಬೋರೆಹಳ್ಳಿ, ಪುಣ್ಯಕ್ಷೇತ್ರ ಗಂಗೆಮಡು ಸೇರಿದಂತೆ ಕೆಲವು ಗ್ರಾಮಗಳ ಸಂಪರ್ಕವಿದ್ದು, ಸಹಸ್ರಾರು ಕುಟುಂಬಗಳು ಒಕ್ಕಲುತನವನ್ನೇ ನಂಬಿ ಬದುಕು ಸಾಗಿಸುತ್ತಿವೆ. ಈಗಾಗಲೇ ಗ್ರಾಮದ ಸರಹದ್ದಿನಲ್ಲಿ ಹಾದು ಹೋಗಿರುವ ರೈಲ್ವೆ ಮಾರ್ಗ, ಎತ್ತಿನಹೊಳೆ ನಾಲಾ ನಿರ್ಮಾಣ ಕಾಮಗಾರಿ, ಅನಿಲ ಪೂರೈಕೆ ಕೊಳವೆ ಮಾರ್ಗ, ಹೈಟೆನ್ಶನ್ ವಿದ್ಯುತ್ ಮಾರ್ಗ ಸೇರಿದಂತೆ ಹಲವು ಯೋಜನೆಗಳಿಗೆ ಕೃಷಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ.
ಹಿಂದೆ ಇದೇ ತಾಲೂಕಿನ ರಾಂಪುರ, ಶಶಿವಾರ, ಜೆಸಿಪುರ, ಕಣಕಟ್ಟೆ ಗ್ರಾಮಗಳಲ್ಲಿಯೂ ಖನಿಜ ನಿಕ್ಷೇಪವಿದೆ ಎಂದು ಆಂಧ್ರಪ್ರದೇಶ ಮೂಲದ ಅಧಿಕಾರಿಗಳು ಬಂದು ಸರ್ವೇ ಕಾರ್ಯ ಮಾಡಿ ರೈತರನ್ನು ಒಕ್ಕಲೆಬ್ಬಿಸಿದ್ದು, ಇದುವರೆಗೂ ಅಲ್ಲಿನ ರೈತರಿಗೆ ಸರಿಯಾದ ಮಾಹಿತಿ ನೀಡಿದೆ ಸುಮ್ಮನಾಗಿದ್ದಾರೆ ಎನ್ನಲಾಗ್ತಿದೆ.
ಒಟ್ಟಾರೆ ಕೃಷಿ ಭೂಮಿಯನ್ನು ಮನಬಂದಂತೆ ಅಗೆದು ಹಾಳು ಮಾಡಲಾಗಿದ್ದು, ಈ ಭಾಗದಲ್ಲಿ ಚಿನ್ನ ಸಿಗುತ್ತೆ ಅಂತಿರೋದು ರೈತರ ನೆಮ್ಮದಿ ಕೆಡಿಸಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.