ಸಕಲೇಶಪುರ (ಹಾಸನ): ರೈತರ ಕಷ್ಟಗಳೆಲ್ಲಾ ಜನರಿಗೆ ತಿಳಿಯಲಿ ಎಂದು ಕಂದಾಯ ಇಲಾಖೆ ವತಿಯಿಂದ ಗದ್ದೆಯಲ್ಲಿ ಭತ್ತದ ಸಸಿ ನಾಟಿ ಮಾಡುವ ಕಾರ್ಯಕ್ರಮವನ್ನು ಕಂದಾಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದೆ ಎಂದು ತಹಶೀಲ್ದಾರ್ ಮಂಜುನಾಥ್ ಹೇಳಿದರು.
ಪಟ್ಟಣದಲ್ಲಿ ಕಂದಾಯ ಇಲಾಖೆ ವತಿಯಿಂದ ಕಂದಾಯ ದಿನಾಚರಣೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಪ್ರತಿ ವರ್ಷದಂತೆ ಜುಲೈ 1ರಂದು ಕರ್ನಾಟಕದಾದ್ಯಂತ ಕಂದಾಯ ದಿನಾಚರಣೆ ಆಚರಿಸಲಾಗುತ್ತಿದೆ. ಈ ವರ್ಷ ಕಂದಾಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗಿದ್ದು, ಕಾರ್ಯಕ್ರಮದ ಅಂಗವಾಗಿ ಕೊರೊನಾ ಕುರಿತು ಜಾಗೃತಿ ಅಭಿಯಾನ ಹಾಗೂ ಭತ್ತದ ಸಸಿಗಳನ್ನು ನಾಟಿ ಮಾಡಲಾಗಿದೆ ಎಂದರು.
ಕೊರೊನಾದಿಂದಾಗಿ ರೈತರು ಹಾಗೂ ಜನಸಾಮಾನ್ಯರು ತುಂಬಾ ಕಷ್ಟ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ಸಂಕಷ್ಟ ಸಿಬ್ಬಂದಿಗೆ ಅರಿವಾಗಬೇಕು. ಕೊರೊನಾ ಆತಂಕದ ನಡುವೆಯೂ ಸಾಮಜಿಕ ಅಂತರ ಕಾಪಾಡಿಕೊಂಡು ಕಂದಾಯ ದಿನಾಚರಣೆಯನ್ನು ವಿಶೇಷವಾಗಿ ಇಂದು ಆಚರಿಸಲಾಗಿದೆ ಎಂದರು.
ಎತ್ತುಗಳಿಗೆ ಪೂಜೆ ಮೂಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಹುತೇಕ ಸಿಬ್ಬಂದಿ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಮೆರವಣಿಗೆಯಲ್ಲಿ ಸಾಗಿ ನಂತರ ಮಳಲಿ ಗ್ರಾಮದ ಸಮೀಪ ಗದ್ದೆಯೊಂದರಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡಿದರು.