ಹಾಸನ: ನಮಗೆ ರಾಜ್ಯದ ಜನರ ಹಿತಾಸಕ್ತಿ ಮುಖ್ಯವಾಗಿತ್ತು. ನಮ್ಮ ಪಕ್ಷದಿಂದ ಯಾರು ರಾಜೀನಾಮೆ ಕೊಟ್ಟು ಬೇರೆ ಪಕ್ಷಕ್ಕೆ ಹೋಗ್ತಾರೆ ಎಂಬ ಬಗ್ಗೆ ಅಲ್ಲ. ನಮ್ಮ ಪಕ್ಷದಿಂದ ಬೆಳೆದು ಬೇರೆ ಪಕ್ಷಕ್ಕೆ ಹೋಗಿರುವರು ಸಾಕಷ್ಟು ಮಂದಿ ಇದ್ದಾರೆ. ಅಂತಹವರನ್ನೆಲ್ಲ ನಂಬಿಕೊಂಡು ದೇವೇಗೌಡರು ರಾಜಕೀಯ ಮಾಡುತ್ತಿಲ್ಲ. ಹಾಗಾಗಿದ್ದರೆ, ದೇವೇಗೌಡ್ರು ಪ್ರಧಾನಿ ಆಗುತ್ತಿರಲಿಲ್ಲ ಅಂತ ರಾಜೀನಾಮೆ ವದಂತಿ ಕುರಿತು ಮಾಜಿ ಸಚಿವ ರೇವಣ್ಣ ಕಟುವಾಗಿ ಪ್ರತ್ಯುತ್ತರ ಕೊಟ್ಟರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಮೋದಿ 25 ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದಕ್ಕೆ ಸಾಕಷ್ಟು ಬಾರಿ ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಗೆಲ್ಲಿಸಿ ಕೊಂಡರು ಈಗ ಯಾಕೆ ಬರ್ತಾರೆ..? ಮತ್ತೆ ಅವರು ಬರಬೇಕು ಅಂದ್ರೆ ರಾಜ್ಯದಲ್ಲಿ ಯಾರನ್ನಾದರೂ ಗೆಲ್ಲಿಸಿ ಕೊಳ್ಳುವುದಕ್ಕೆ ಅಷ್ಟೇ ಅಂತ ಮಾತಿನಲ್ಲಿ ಮೋದಿಯನ್ನು ಕುಟುಕಿದ ಅವರು ಪ್ರವಾಹಪೀಡಿತ ಸಂತ್ರಸ್ತರನ್ನು ವಿಚಾರಿಸುವುದಕ್ಕೆ ಅವರಿಗೆ ಸಮಯಾವಕಾಶ ಇಲ್ಲ ಎಂದು ಸಿಟ್ಟಿನ್ನ ಹೊರಹಾಕಿದ್ರು.
ಈಗಾಗಲೇ ನಾವು ಜಿಲ್ಲೆಯ ತಾಲ್ಲೂಕುಗಳಿಗೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿದ್ದೇವೆ. ಅಷ್ಟೇ ಅಲ್ಲದೆ ಉತ್ತರ ಭಾಗಕ್ಕೂ ನಾನು ಮತ್ತು ಕುಮಾರಸ್ವಾಮಿ ಇಬ್ಬರೂ ಹೋಗಿ ನೆರೆ ಸಂತ್ರಸ್ತರನ್ನು ಮಾತನಾಡಿಸಿ ಬಂದಿದ್ದೇವೆ. ನಮಗೆ ರಾಜ್ಯದ ಜನತೆ ಮುಖ್ಯವೇ ಹೊರತು ಸದ್ಯ ರಾಜಕೀಯವಲ್ಲ. ಚುನಾವಣೆ ಬಂದಾಗ ರಾಜಕೀಯ ಮಾಡೋಣ ಈಗ ಎಲ್ಲದಕ್ಕೂ ಉತ್ತರ ಕೊಟ್ಟರೆ ಅದು ಸಮಂಜಸವಲ್ಲ ಎಂದರು.
ಇನ್ನು ಮಾಜಿ ಸಚಿವ ಶ್ರೀನಿವಾಸ್, ಅನರ್ಹ ಶಾಸಕ ಕೆ.ಆರ್. ಪೇಟೆಯ ನಾರಾಯಣ ಗೌಡ ಹಾಗೂ ಶ್ರವಣಬೆಳಗೊಳದ ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ, ದೇವೇಗೌಡರ ಸೋಲಿಗೆ ಅವರು ಮತ್ತು ಅವರ ಮನೆಯವರೇ ಕಾರಣ ಅಂತ ಕೇಳಿದ್ದಾರೆ ಎಂಬ ಪ್ರಶ್ನೆಗೆ, ಎಲ್ಲರ ಮಾತಿಗೂ ನಾನು ಉತ್ತರ ಕೊಟ್ಟರೆ ನಾನು ಪೊಳ್ಳೆದು ಹೋಗುತ್ತೇನೆ. ಜಿಲ್ಲೆಯಲ್ಲಿ ಇದ್ದಾಗ ಅವರು ಹವಾಯಿ ಸ್ಲಿಪ್ಪರ್ ಹಾಕೊಂಡು ಓಡಾಡೋದು. ಬೆಂಗಳೂರಿಗೆ ಹೋದಾಗ ಸೂಟು ಬೂಟು ಹಾಕಿಕೊಂಡು ಓಡಾಡುವವರ ಬಗ್ಗೆ ಹೆಚ್ಚಾಗಿ ಮಾತನಾಡಲಾರೆ ಎಂದು ಕುಟುಕಿದ್ರು.
ಇನ್ನು ಕುಮಾರಸ್ವಾಮಿ 14 ತಿಂಗಳ ಸಾಧನೆಯೇನು ಅಂತ ಕೆಲವರು ಪ್ರಶ್ನೆ ಮಾಡುತ್ತಾರೆ ತೆಂಗಿನ ನುಸಿ ರೋಗಕ್ಕೆ ₹ 200ಕೋಟಿ, 1000 ಇಂಗ್ಲಿಷ್ ಮಾಧ್ಯಮ ಶಾಲೆ, ₹ 44,000 ಕೋಟಿ ಸಾಲ ಮನ್ನಾ. ಅಲ್ಲದೇ ನಮ್ಮ ಜಿಲ್ಲೆಗೂ ₹ 1600ಕೋಟಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಕೂಡ ಕುಮಾರಸ್ವಾಮಿ ಮಾಡಿಲ್ವಾ..? ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವವರಿಗೆ ನಾನು ಉತ್ತರ ಕೊಡಲಾರೆ. ದೇವೇಗೌಡರ ಸೋಲಿಗೆ ಯಾರು ಕಾರಣ ಎಂಬುದು ರಾಷ್ಟ್ರಕ್ಕೆ ಗೊತ್ತು ಎಲ್ಲವನ್ನು ಸಮಯ ಬಂದಾಗ ಹೇಳುತ್ತೇನೆ ಎಂದ್ರು.
ಉಪಚುನಾವಣೆ ಬರಲಿ ನಾವು ಕೂಡ ಸುಮ್ಮನೆ ಕೂತಿಲ್ಲ ದೇವೇಗೌಡ್ರು ಬೆಳಗ್ಗೆಯಿಂದ ರಾತ್ರಿ ತನಕ ಕಾರ್ಯಕರ್ತರನ್ನ, ಮುಖಂಡರನ್ನ ಭೇಟಿ ಮಾಡ್ತಿದ್ದಾರೆ. ನೆನ್ನೆ ಕೂಡ ಪ್ರಜ್ವಲ್ ಕಡೂರಿಗೆ ಹೋಗಿ ಕಾರ್ಯಕರ್ತರನ್ನ ಮಾತನಾಡಿಸಿಕೊಂಡು ಬಂದಿದ್ದಾರೆ ಚುನಾವಣೆ ಬಂದಾಗ ರಾಜಕೀಯ ಮಾಡೋಣ ಈಗ ನಮಗೆ ಮುಖ್ಯ ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಹಣ ನೀಡದಷ್ಟು ಪಾಪರ್ ಚೀಟಿ ಆಗಿದೆಯಾ ...? ಅದೇನೋ ಅಂತಾರಲ್ಲ ಅದೇನೋ ಹೇಳೋದಿಕ್ಕೆ ಬರ್ತೀಲ್ಲ. ದಿವಾಳಿ ಆಗಿದ್ದೀಯಾ ಅದನ್ನಾದರೂ ಹೇಳಿ ಕೇಳಿ ಯಡಿಯೂರಪ್ಪ ಸರ್ಕಾರವನ್ನು ಕಟುವಾಗಿ ಟೀಕಿಸಿದರು.