ಅರಕಲಗೂಡು (ಹಾಸನ): ತಾಲೂಕಿನ ಹಲವೆಡೆ ಶುಕ್ರವಾರ ರಾತ್ರಿ ಮಳೆಯಾಗಿದ್ದು ರೈತರು ಮಳೆಯಾಶ್ರಿತ ಪ್ರದೇಶದಲ್ಲಿ ಹೊಗೆಸೊಪ್ಪು ನಾಟಿ ಕಾರ್ಯವನ್ನು ಬಿರುಸುಗೊಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ರಾಮನಾಥಪುರ, ದೊಡ್ಡಮಗ್ಗೆ, ಕೊಣನೂರು, ದೊಡ್ಡಬೆಮ್ಮತ್ತಿ, ಕಸಬಾ, ಬಸವಾಪಟ್ಟಣ ಭಾಗದಲ್ಲಿ ಎರಡು ದಿನಗಳಿಂದ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿದೆ.
ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಗಿಡಗಳ ನಾಟಿ ಕೆಲಸ ಚುರುಕುಗೊಂಡಿದೆ. ಕಳೆದ ವಾರ ಬಿದ್ದ ಮಳೆಗೆ ಮೊದಲ ಹಂತದ ನಾಟಿ ಕೆಲಸ ಆರಂಭಿಸಿದ್ದ ರೈತರು, ತದನಂತರ ಮಳೆಯಿಲ್ಲದೆ ನಾಟಿಯಾದ ಗಿಡಗಳು ಸೊರಗಲಾರಂಭಿಸಿದ್ದವು. ಇದರಿಂದಾಗಿ ಸಸಿ ಮಡಿಗಳನ್ನು ಕಿತ್ತು ನಾಟಿ ಮಾಡಲು ತೊಡಕಾಗಿತ್ತು. ಇದೀಗ ಸುರಿದ ಹದ ಮಳೆ ಹೊಗೆಸೊಪ್ಪು ಬೆಳೆಗಾರರ ಸಂತಸವನ್ನು ಇಮ್ಮಡಿಗೊಳಿಸಿದೆ. ಎರಡು ದಿನಗಳಿಂದ ತಂಬಾಕು ನಾಟಿ ಕಾಯದಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ.
ತಂಬಾಕು ಬೆಳೆಗೆ ಹೆಸರಾದ ರಾಮನಾಥಪುರ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಮಳೆ ಮಾಪನದಲ್ಲಿ ರಾಮನಾಥಪುರದಲ್ಲಿ 28.0 ಮಿ.ಮೀ ಹಾಗೂ ದೊಡ್ಡಮಗ್ಗೆ 18.2 ಮಿ.ಮೀ, ಮಲ್ಲಿಪಟ್ಟಣ 6.0 ಮಿ.ಮೀ, ಕೊಣನೂರು 26.0 ಮಿ.ಮೀ, ಕಸಬಾ 4.1 ಮಿ.ಮೀ ಮತ್ತು ಬಸವಾಪಟ್ಟಣದಲ್ಲಿ23.6 ಮಿ.ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.