ಹಾಸನ : ಪ್ರತಿ ವರ್ಷದಂತೆ ಈ ವರ್ಷವೂ ಅಧಿದೇವತೆ ಹಾಸನಾಂಬೆ ದರ್ಶನೋತ್ಸವದ ಸಿದ್ಧತೆಗಳು ನಡೆಯುತ್ತಿವೆ. ದೇವಿ ದರ್ಶನಕ್ಕೆ ಬಾಗಿಲು ತೆಗೆಯಲು ಇನ್ನೊಂದು ದಿವಸ ಇರುವಂತೆ ರಸ್ತೆ ಉದ್ದಕ್ಕೂ ಒಂದು ಕಡೆ ವಿದ್ಯುತ್ ಲೈಟ್ ಅಲಂಕಾರ ನಡೆಯುತ್ತಿದ್ದರೇ, ಮತ್ತೊಂದು ಕಡೆ ಇನ್ನೂ ದುರಸ್ತಿಯಾಗದ ರಸ್ತೆಗಳ ಮಧ್ಯೆ ಅಲ್ಲಲ್ಲಿ ಗುಂಡಿಗಳ ದರ್ಶನ ಹಾಗೂ ಕಸದ ರಾಶಿಗಳು ಎದುರಾಗುತ್ತಿವೆ.
ಈ ಬಾರಿ ಕೋವಿಡ್ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರಿಗೆ ದೇವಾಲಯದ ಒಳಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಆದರೆ, ದೇವಾಲಯದ ಆವರಣ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ಎಲ್ಇಡಿ ಪರದೆ ಅಳವಡಿಸಿ 12 ದಿನಗಳ ಕಾಲವೂ ನೇರ ಪ್ರಸಾರ ಮಾಡಲಾಗುವುದು ಮತ್ತು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕವೂ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಅಲ್ಲಿಯೇ ವೀಕ್ಷಣೆ ಮಾಡಬಹುದಾಗಿದೆ.
ಮೊದಲ ಹಾಗೂ ಕಡೆಯ ದಿನ ಕೇವಲ ಜನಪ್ರತಿನಿಧಿಗಳು, ವಿಶೇಷ ಆಹ್ವಾನಿತರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿಗೆ ಮಾತ್ರ ಅವಕಾಶ ಇರಲಿದೆ. ನೂಕುನುಗ್ಗಲು ತಪ್ಪಿಸಲು ದೇವಾಲಯದ ಪಕ್ಕ ಬ್ಯಾರಿಕೇಡ್ ಅಳವಡಿಸಲಾಗಿದೆ.
ಇನ್ನೊಂದು ದಿನದಲ್ಲಿ ತಾತ್ಕಲಿಕವಾಗಿ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಹಾಗೂ ಪ್ರಮುಖ ರಸ್ತೆ ಬಳಿ ಇರುವ ಕಸದ ರಾಶಿಗಳನ್ನು ಸ್ವಚ್ಚಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.