ಹಾಸನ: ಪಿಎಸ್‌ಐ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನಕ್ಕೊಳಗಾದ ಅಭ್ಯರ್ಥಿಯ ಸಹೋದರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ನಡೆದಿದೆ. ಹೊಳೆನರಸೀಪುರ ತಾಲೂಕಿನ ಗುಂಜೇವು ಗ್ರಾಮದ ಮನುಕುಮಾರ್ ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿ. ಈತನ ಅಣ್ಣ ವಾಸು ಆತ್ಮಹತ್ಯೆ ಮಾಡಿಕೊಂಡವರು. ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಹಗರಣದ ಸಂಬಂಧ ಮನುಕುಮಾರ್ರನ್ನು ಏಪ್ರಿಲ್ 30ರಂದು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು.
ತಮ್ಮನ ಬಂಧನದಿಂದ ಅಣ್ಣ ವಾಸು ನೊಂದಿದ್ದನಂತೆ. ಪಿಎಸ್‌ಐ ಆಗಲಿ ಎಂದು ಸಾಲ ಮಾಡಿ ಅಣ್ಣ ಹಣ ನೀಡಿದ್ದ ಎಂದು ಹೇಳಲಾಗ್ತಿದೆ. ತಮ್ಮ ಪಿಎಸ್‌ಐ ಆಗಲಿಲ್ಲ, ಹಣವೂ ಕೈ ತಪ್ಪಿತು ಎಂದು ಮನನೊಂದು ವಾಸು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೃತ ವಾಸು ತಾಯಿ ಶಿವಮ್ಮ, ನನ್ನ ಮಗನ ಸಾವಿಗೂ, ಪಿಎಸ್‌ಐ ಅಕ್ರಮಕ್ಕೂ ಸಂಬಂಧ ಇಲ್ಲ. ಹಣ ಕಳೆದುಕೊಂಡ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಅನುಮಾನ ಇದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಆ್ಯಸಿಡ್ ನಾಗ ಯಾವುದೇ ಸಾಕ್ಷಿ ಬಿಡದೆ ಪರಾರಿಯಾಗಿದ್ದಾನೆ : ಕಮಿಷನರ್ ಕಮಲ್ ಪಂತ್