ಹಾಸನ: ಕೋವಿಡ್ ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಶೇ. 50ರಷ್ಟು ಹಾಸಿಗೆ ಬಿಟ್ಟುಕೊಡಬೇಕು ಎಂಬ ಸರ್ಕಾರದ ಆದೇಶದ ಅನ್ವಯ, ಜಿಲ್ಲೆಯ ಸೋಂಕಿತರಿಗೆ ನಗರದ 7 ಖಾಸಗಿ ಆಸ್ಪತ್ರೆಗಳನ್ನು ನಿಗದಿ ಮಾಡಲಾಗಿದ್ದು, ಒಟ್ಟಾರೆ 290 ಹಾಸಿಗೆ ಲಭ್ಯವಿದೆ.
ನಿಗದಿತ ಆಸ್ಪತ್ರೆಗಳು ಹಾಗೂ ಅಲ್ಲಿ ಲಭ್ಯವಿರುವ ಹಾಸಿಗೆಗಳ ವಿವರ:
ಕೆಆರ್ಪುರಂನ ಜನಪ್ರಿಯ ಆಸ್ಪತ್ರೆಯಲ್ಲಿ 40, ಮಂಗಳ ಆಸ್ಪತ್ರೆ ಹಾಗೂ ರಾಜೀವ್ ನರ್ಸಿಂಗ್ ಹೋಂನಲ್ಲಿ ತಲಾ 50, ಬಿ.ಎಂ ರಸ್ತೆಯ ಸ್ಪರ್ಶ ಆಸ್ಪತ್ರೆಯಲ್ಲಿ 40, ಕೆಆರ್ ಪುರಂ ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ಇದೇ ಆಸ್ಪತ್ರೆಯ ಸಾಲಗಾಮೆ ರಸ್ತೆಯಲ್ಲಿರುವ ಶಾಖೆಯಲ್ಲಿ ತಲಾ 40 ಮತ್ತು ಆರ್ಸಿ ರಸ್ತೆಯ ಸಿಎಸ್ಐ ಆಸ್ಪತ್ರೆಯಲ್ಲಿ 30 ಬೆಡ್ಗಳ ವ್ಯವಸ್ಥೆಯಿದೆ.
ನಿಗದಿತ ಆಸ್ಪತ್ರೆಗಳಲ್ಲಿ ಯಾವುದೇ ಕುಂದು - ಕೊರತೆ ಕಂಡು ಬಂದಲ್ಲಿ ಕೋವಿಡ್ ಖಾಸಗಿ ಆಸ್ಪತ್ರೆಗಳ ನೋಡಲ್ ಅಧಿಕಾರಿ ಡಾ. ಕೆ.ಪಿ. ಕಾಂತರಾಜ್ ಅವರ ಮೊಬೈಲ್ 9449843200 ಸಂಖ್ಯೆಗೆ ಮತ್ತು ಸಹಾಯವಾಣಿ 08172-246575 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮನೆಯಿಂದ ಹೊರ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು. ಈ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಜನತೆಗೆ ಮನವಿ ಮಾಡಲಾಗಿದೆ.