ಹಾಸನ: ಕಳೆದ ಆರು ತಿಂಗಳಿನಿಂದ ಎಲ್ಲರ ಚಿತ್ತ ಚುನಾವಣೆ ಮೇಲಿತ್ತು. ಕೊನೆಗೂ ದಿನಾಂಕ ಪ್ರಕಟವಾಗುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ. ಕರ್ನಾಟಕದಲ್ಲಿ ಕೂಡ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿಯಾದರೂ ಹಾಸನ ಜಿಲ್ಲೆಯಲ್ಲಿ 19ರಂದು ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಲಿದೆ.
ರಾಷ್ಟ್ರದ 17ನೇ ಲೋಕಸಭಾ ಚುನಾವಣೆಗೆ ಮಹೂರ್ತ ಫಿಕ್ಸ್ ಆಗಿದೆ. 2019ರ ಚುನಾವಣೆಗೆ ಜಿಲ್ಲೆಯಲ್ಲಿ ಕೂಡ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಇವತ್ತು ಜಿಲ್ಲಾಧಿಕಾರಿ ಅಕ್ರಮ್ ಪಾಷ ಸುದ್ದಿಗೋಷ್ಠಿ ಮೂಲಕ ಚುನಾವಣೆಯ ಬಗ್ಗೆ ಕೆಲವು ಮಾಹಿತಿಯನ್ನು ನೀಡಿದರು.ಇನ್ನು ಹಾಸನ ಲೋಕಸಭಾ ಚುನಾವಣೆಗೆ ಮಾರ್ಚ್ 19ರಂದು ಅಧಿಸೂಚನೆ ಹೊರ ಬೀಳಲಿದ್ದು, ನಾಮಪತ್ರಗಳನ್ನು ಸಲ್ಲಿಸಲು ಮಾರ್ಚ್ 26ರಂದು ಕೊನೆಯ ದಿನವಾಗಿದೆ.
ನಾಮಪತ್ರ ಪರಿಶೀಲನೆ ಮಾರ್ಚ್ 27, ನಾಮಪತ್ರ ಹಿಂಪಡೆಯಲು ಮಾರ್ಚ್ 29 ಕೊನೆಯ ದಿನವಾಗಿದೆ.ಇನ್ನು ಹಾಸನ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು, ಇತ್ತಿಚೀಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದ ಶಾಂತಿಗ್ರಾಮ ಸೇರಿ 9 ತಾಲೂಕುಗಳಿವೆ. ಅಲ್ಲದೆ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರ ಕೂಡ ಹಾಸನ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 20,62,257 ಜನಸಂಖ್ಯೆ ಇದ್ದು,16,29,587 ಮತದಾರರಿದ್ದಾರೆ. 8,22,399 ಪುರುಷ ಮತದಾರರು ಹಾಗೂ 87,188 ಮಹಿಳಾ ಮತದಾರರಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ವಿಶೇಷ ನೋಡಲ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ಗಳು ಜಿಲ್ಲೆಯ ಗಡಿ ಭಾಗದಲ್ಲಿ ಕಣ್ಗಾವಲು(ವಿಚಕ್ಷಣಾ) ದಳ ನೇಮಿಸಲಾಗಿದೆ. ಇದರೊಂದಿಗೆ ಜಿಲ್ಲೆಯ ಗಡಿ ಭಾಗದಲ್ಲಿ 20 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆಯಂತೆ.
ಸರ್ಕಾರದ ಸಾಧನಾ ಪ್ರಚಾರ ಫಲಕಗಳಗಳನ್ನು ತೆರವುಗೊಳಿಸುವ ಕಾರ್ಯವನ್ನು ಕೂಡ ಮಾಡಲಾಗುತ್ತಿದ್ದು, ಸಾರ್ವಜನಿಕ ವೆಬ್ಸೈಟ್ ಮತ್ತು ಸಾರ್ವಜನಿಕ ಆಸ್ತಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಬ್ಯಾನರ್, ಬಂಟಿಂಗ್ಸ್, ಚುನಾವಣಾ ಪ್ರಚಾರ ಸಾಮಾಗ್ರಿಗಳನ್ನ ಹಾಕದಂತೆ ಆದೇಶ ಹೊರಡಿಸಿದ್ದಾರೆ.ಭಾರತ ಸರ್ಕಾರ ಈಗಾಗಲೇ ಚುನಾವಣೆಯನ್ನು ಕಟ್ಟುನಿಟ್ಟಿನ ಮೂಲಕ ಯಶಸ್ವಿಯಾಗಿ ನಡೆಸಲು 'cVigil Application' ಕೂಡ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಇದರ ಮೂಲಕ ದೂರು ಕೂಡ ದಾಖಲು ಮಾಡಲು ಅನುವು ಮಾಡಿಕೊಟ್ಟಿದೆ ಎಂದರು.
ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪ್ರಚಾರಕ್ಕೆ ಸಂಬಂಧಿಸಿದಂತೆ ಸಮಾರಂಭ ನಡೆಸುವ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯಲು ಒಂದೇ ಸೂರಿನಡಿ ಎಲ್ಲಾ ಇಲಾಖೆ ಒಳಗೊಂಡ ಸುವಿಧ ತಂತ್ರಾಂಶ ಬಹಳ ಉಪಯುಕ್ತವಾಗಿದೆ ಎಂದರು.ಒಟ್ಟಾರೆ ಜಿಲ್ಲೆಯಲ್ಲಿ 17 ನೇ ಲೋಕಸಭಾ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದ್ದು, ಹಾಸನ ಮತ್ತು ಕಡೂರಿನ 9 ತಾಲೂಕುಗಳಲ್ಲಿ ವಿಶೇಷ ತಂಡವನ್ನು ರಚನೆ ಮಾಡಿ ನಿರ್ಭೀತ ಚುನಾವಣೆ ಮಾಡಲು ಸಕಲ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎನ್ನಬಹುದು..