ಹಾಸನ/ಅರಕಲಗೂಡು: ರಂಜಾನ್ ಮಾಸದಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿದ್ದು, ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಇದೇ 24ರಿಂದ ರಂಜಾನ್ ಮಾಸ ಶುರುವಾಗಲಿದ್ದು, ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಂತಿಲ್ಲ. ಇಫ್ತಿಯಾರ್ ಕೂಟ, ಮಸೀದಿಗಳ ಮುಂದೆ ಸಮೋಸಾ ಮಾರಾಟಕ್ಕೆ ಕಡಿವಾಣ ಹಾಕಬೇಕು. ಮನೆಗಳಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.
ಈಗಾಗಲೇ ತಾಲೂಕಿನ ಹೋಬಳಿ ಕೇಂದ್ರಗಳು ಹಾಗೂ ಹಳ್ಳಿಗಳಿಗೆ ಭೇಟಿ ನೀಡಿದ್ದು, ಮಸೀದಿಗಳಲ್ಲಿ ಕೆಲವರು ಸರ್ಕಾರದ ಆದೇಶ ಪಾಲಿಸದಿರುವುದು ಕಂಡುಬಂದಿದೆ. ರಂಜಾನ್ ಮಾಸದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ಮುಸ್ಲಿಂ ಮುಖಂಡರು ಸಮುದಾಯದ ಜನರಿಗೆ ಮಾಹಿತಿ ರವಾನಿಸಿ ಸಹಕರಿಸಬೇಕು ಎಂದರು.
ಸಿಪಿಐ ದೀಪಕ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳು, ವೃದ್ಧರು, ಮಕ್ಕಳು ರಂಜಾನ್ ಮಾಸದಲ್ಲಿ ಉಪವಾಸ ಇರುವುದು ಸೂಕ್ತವಲ್ಲವೆಂದು ಹೇಳಿದೆ. ಸಮುದಾಯದ ಬಾಂಧವರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ತಾಲೂಕು ಆಡಳಿತವು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದಿಂದ ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಶ್ರಮಿಸುತ್ತಿದೆ. ಚೆಕ್ ಪೋಸ್ಟ್ಗಳಲ್ಲಿ ಹೊರಗಿನವರ ಪ್ರವೇಶ ನಿಷೇಧಿಸಲಾಗಿದೆ.
ನಿನ್ನೆ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಭೇಟಿ ನೀಡಿ ಪರಿಶೀಲಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರ ಸಹಕಾರದಿಂದ ತಾಲೂಕಿನಲ್ಲಿ ಕೊರೊನಾ ಸೋಂಕಿತರು ಕಾಣಿಸಿಕೊಂಡಿಲ್ಲ. ಇದು ಸಂತಸದ ಸಂಗತಿ ಎಂದರು.