ಹಾಸನ: ನಗರ ಸಭೆ ಸದಸ್ಯ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳುತ್ತಾರೆ. ಆದ್ರೆ ಪೊಲೀಸ್ ಇಲಾಖೆ ನಾವು ಯಾರನ್ನೂ ಕೂಡ ಬಂಧಿಸಿಲ್ಲ. ಈ ವಿಚಾರ ನನಗೆ ಗೊತ್ತಿಲ್ಲ ಎನ್ನುತ್ತದೆ. ಹಾಗಾದ್ರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಬಗ್ಗೆ ಅರಿವಿಲ್ಲವೇ ಅಥವಾ ಪೊಲೀಸ್ ಇಲಾಖೆಯ ಮಾಹಿತಿ ಪಡೆಯಲು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರಾ? ಅಥವಾ ಪೊಲೀಸ್ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಒಂದು ಮಾಹಿತಿ, ಮಾಧ್ಯಮಗಳಿಗೆ ಒಂದು ಮಾಹಿತಿ ನೀಡುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸುತ್ತಿದೆಯಾ ಎಂಬ ಅನುಮಾನ ಇದೀಗ ಶುರುವಾಗಿದೆ.
ಪ್ರಶಾಂತ್ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ ಎಂದು ಈಗಾಗಲೇ ಪತ್ರಿಕೆ ಮತ್ತು ಕೆಲವು ವಾಹಿನಿಗಳಲ್ಲಿ ಸುದ್ದಿ ಪ್ರಕಟವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಪ್ರಕರಣಕ್ಕೆ ಪೂರಕವಾಗಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಿದ್ದಾರೆ. ಈಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳಿದ್ದಾರೆ. ಅವರ ಬಂಧನವಾದ ಬಳಿಕ ಕೊಲೆ ಪ್ರಕರಣದ ಸತ್ಯಾಂಶ ಹೊರಬೀಳಲಿದೆ ಎಂದು ಸ್ಪಷ್ಟೀಕರಣ ಕೊಟ್ಟರು.
ಹಾಗಾದ್ರೆ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಸತ್ಯವಲ್ಲವೇ? ಪೊಲೀಸ್ ಇಲಾಖೆಯ ಮಾಹಿತಿಯನ್ನೇ ಆಧರಿಸಿ ಒಬ್ಬ ಜಿಲ್ಲಾ ಉಸ್ತುವಾರಿ ಸಚಿವ ಹೇಳಿಕೆ ನೀಡುವುದು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ದಕ್ಷಿಣ ವಲಯ ಐಜಿಪಿ ಎನ್ನುವುದಾದರೆ, ಹಾಸನ ಪೊಲೀಸ್ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಒಂದು ಮಾಹಿತಿ ಮತ್ತು ದಕ್ಷಿಣ ವಲಯದ ಐಜಿಪಿಗೆ ಒಂದು ಮಾಹಿತಿಯನ್ನು ರವಾನಿಸಿದೆಯಾ? ಅಥವಾ ಪ್ರಕರಣ ನಿಜಕ್ಕೂ ದಿಕ್ಕು ತಪ್ಪುತ್ತಿದೆಯೇ? ಎಂಬ ಅನುಮಾನ ಇದೀಗ ಬಲವಾಗಿದೆ.
ಇದನ್ನೂ ಓದಿ: ಹಾಸನ ನಗರಸಭೆ ಸದಸ್ಯನ ಬರ್ಬರ ಕೊಲೆ.. ಆಟೋದಲ್ಲಿ ಬಂದು ರಸ್ತೆಯಲ್ಲೇ ಕೊಚ್ಚಿ ಕೊಂದ್ರು!
ಆದರೆ, ದಕ್ಷಿಣ ವಲಯದ ಐಜಿಪಿ ಮಾತ್ರ ಆರೋಪಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿಗೆ ನಾವು ಯಾರನ್ನೂ ಕೂಡ ಬಂಧಿಸಿಲ್ಲ ಎಂದು ಹೇಳುತ್ತಾರೆ, ಜೊತೆಗೆ ಸಚಿವರು ಹೇಳಿದ್ದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಒಬ್ಬ ನಗರಸಭಾ ಸದಸ್ಯನ ಕೊಲೆ ಪ್ರಕರಣದಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುವುದು ಎಷ್ಟು ಸರಿ? ಮಾಧ್ಯಮಗಳನ್ನು ದಿಕ್ಕುತಪ್ಪಿಸಲು ಈ ರೀತಿ ವಿಭಿನ್ನ ಹೇಳಿಕೆ ಕೊಡುತ್ತಿದ್ದಾರೆಯೇ? ಅಥವಾ ಆರೋಪಿಗಳನ್ನು ರಕ್ಷಣೆ ಮಾಡಲು ಪೊಲೀಸ್ ಇಲಾಖೆಯೇ ದಿಕ್ಕು ತಪ್ಪಿಸುತ್ತಿದೆಯಾ? ಎಂಬ ಪ್ರಶ್ನೆ ಇದೀಗ ಮೂಡಿದೆ.