ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಒಂದು ತಿಂಗಳ ಅಂತರದಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ರೈತರ ಜಮೀನಿಗೆ ದಾಳಿ ಮಾಡಿರುವ ಆನೆಗಳು ಭತ್ತ, ಕಬ್ಬು, ಕಾಫಿ, ಮೆಣಸು ಸೇರಿ ಹಲವು ಬೆಳೆಗಳನ್ನು ಹಾನಿ ಮಾಡಿವೆ.
ಸಕಲೇಶಪುರ-ಆಲೂರು ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಪ್ರತಿ ವರ್ಷವೂ ಕಾಡಾನೆಗಳ ಸಂತತಿ ಹೆಚ್ಚುತ್ತಿದೆ. ಹೀಗಾಗಿ ಇಂದಿನಿಂದ ಮೂರು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಹಾಗೂ ಒಂಟಿ ಸಲಗ ಸೆರೆ ಆಪರೇಷನ್ ಶುರುವಾಗಿದೆ. ಮತ್ತಿಗೋಡು ಕ್ಯಾಂಪ್ನಿಂದ ಅಭಿಮನ್ಯು, ಗಣೇಶ್, ಗೋಪಾಲಸ್ವಾಮಿ ಎಂಬ ಸಾಕಾನೆಗಳು ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ.
ರೇಡಿಯೋ ಕಾಲರ್ ಅಳವಡಿಸಿರುವುದರಿಂದ ಆನೆ ಯಾವ ಭಾಗದಲ್ಲಿ ಓಡಾಡುತ್ತಿದೆ ಎಂಬುದು ತಿಳಿಯಲಿದೆ. ಅದರಿಂದ ಆ ಭಾಗದ ರೈತರು ಎಚ್ಚರಿಕೆಯಿಂದ ಇರಲು ಸೂಚಿಸಬಹುದಾಗಿದೆ.
ಎಲ್ಲಾ ಆನೆಗಳ ಸೆರೆ ಹಿಡಿಯುವಂತೆ ಸ್ಥಳೀಯರ ಆಗ್ರಹ
ಸದ್ಯ ಅರಣ್ಯ ಇಲಾಖೆ ಒಂಟಿ ಸಲಗವನ್ನು ಸೆರೆ ಹಿಡಿದು ಸ್ಥಳಾಂತರಿಸಲು ನಿರ್ಧರಿಸಿದ್ದು, ಉಳಿದ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿಲು ನಿರ್ಧರಿಸಿದೆ. ಅರಣ್ಯ ಇಲಾಖೆಯ ಈ ನಿರ್ಧಾರದ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಎಲ್ಲಾ ಆನೆಗಳನ್ನೂ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.
ಕೇವಲ ಒಂದು ಆನೆ ಸೆರೆ ಹಿಡಿದರೆ ಯಾವ ಪ್ರಯೋಜನವೂ ಇಲ್ಲ. ಬದಲಾಗಿ ಎಲ್ಲಾ ಆನೆಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದು, ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಜ. 24-27ರವರೆಗೆ ರಾಜ್ಯದ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ!