ಹಾಸನ: ಬೇಲೂರಿನ ಚುನಾವಣೆ ಬಗ್ಗೆ ನಾನು ಈ ಬಾರಿ ಅತಿ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಮುಸಲ್ಮಾನರು ಮಾತ್ರ ಅದ್ಯಾಕೋ ಕಾಂಗ್ರೆಸ್ ಅವರನ್ನು ಬಿಡುತ್ತಿಲ್ಲ. ಆದರೆ ಎರಡು ರಾಷ್ಟ್ರೀಯ ಪಕ್ಷಗಳು ನಮ್ಮನ್ನ ಮುಗಿಸಬೇಕು ಅಂತ ಕಾಯ್ತಾ ಇದ್ದಾರೆ. ಹಾಗಾಗಿ ನಾವು ಸೋಲುವುದಕ್ಕೆ ಕಾರಣ ಅಂತ ಮಾಜಿ ಸಚಿವ ಎಚ್ ಡಿ ರೇವಣ್ಣ ಬೇಲೂರಿನ ಪುರಸಭೆ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಸಂಸದರು ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ನಿಂದ ಹಣಬಲ ಇರುವವರೇ ನಿಂತಿದ್ದಾರೆ. ಜೊತೆಗೆ ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡ ಪರಿಣಾಮ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಸೋಲು ಮತ್ತೊಂದು ಕಾರಣ. ಇನ್ನು ರಾಷ್ಟ್ರೀಯ ಪಕ್ಷ ಬಿಜೆಪಿ ರಾಜ್ಯದಲ್ಲಿ ತನ್ನ ಆಡಳಿತವಿದ್ದರೂ ಕೇವಲ ಒಂದು ಸ್ಥಾನ ಪಡೆದಿರುವುದಕ್ಕೆ ನಾಚಿಕೆಯಾಗಬೇಕು ಎಂದರು.
ಚುನಾವಣಾ ಆಯೋಗ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ಕೆಲಸವಾಗಿದ್ದು ಇಂತಹ ಕೊರೊನಾ ತುರ್ತು ಸಂದರ್ಭದಲ್ಲಿ ಚುನಾವಣೆಗಳು ಬೇಕಿರಲಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸುವುದೇ ಇವರ ಉದ್ದೇಶ. ಆದರೆ 2023ಕ್ಕೆ ಜೆಡಿಎಸ್ ರಾಜ್ಯದಲ್ಲಿ ಗೆಲ್ಲಿಸಿ ಗೆಲುವು ಸಾಧಿಸುವುದು ಹೇಗೆ ಎಂಬುದು ನಮಗೆ ಗೊತ್ತಿದೆ ಅದನ್ನು ಮತ್ತೊಮ್ಮೆ ಮಾತನಾಡುತ್ತೇನೆ ಎಂದರು.
ಹಾಸನ ಜಿಲ್ಲೆಯ ಬೇಲೂರಿನ ಪುರಸಭಾ ಚುನಾವಣೆ ಫಲಿತಾಂಶದಲ್ಲಿ ಈ ಬಾರಿ ಜೆಡಿಎಸ್ಗೆ ಮುಖಭಂಗವಾಗಿತ್ತು. 23 ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ 17 ಸ್ಥಾನವನ್ನು ಪಡೆದರೇ, ಜೆಡಿಎಸ್ 5 ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಇನ್ನೂ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿದ್ದು ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಧ್ವಜ ಹಾರಿಸಿದೆ.