ಹಾಸನ: ರಾಜ್ಯದ ಮಾರುಕಟ್ಟೆಯಲ್ಲಿ ರಾಸಾಯನಿಕ ಬಳಸಿದ ಮಾವಿನ ಹಣ್ಣು ಮಾರಾಟ ಮಾಡುತ್ತಿರುವುದು ತುಂಬಾ ಬೇಸರದ ಸಂಗತಿ ಎಂದ ಹಾಸನ ಲೋಕಸಭಾ ಕ್ಷೇತ್ರದ ನೂತನ ಸಂಸದ ಪ್ರಜ್ವಲ್ ರೇವಣ್ಣ, ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಹಾಸನ ಜಿಲ್ಲಾಡಳಿತ ಮತ್ತು ತೋಟಗಾರಿಕೆಯ ವತಿಯಿಂದ ಹಮ್ಮಿಕೊಂಡಿರುವ ಮಾವು ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ತೋಟದಲ್ಲಿಯೂ ಕೂಡಾ ನಾವು ಮಾವು ಬೆಳೆದಿದ್ದು, ಆದ್ರೆ ಮಾವು ಮೇಳದಿಂದ ನನಗೆ 54 ವಿವಿಧ ರೀತಿಯ ಮಾವಿನ ಹಣ್ಣಿನ ಜಾತಿಗಳಿವೆ ಎಂಬುದು ತಿಳಿಯಿತು. ಇವತ್ತು ವೈದ್ಯರು ಆರೋಗ್ಯವಾಗಿರಲು ಹಣ್ಣನ್ನ ತಿನ್ನಬೇಕು ಎಂದು ಸಲಹೆ ನೀಡಿದ್ರು ಕೂಡಾ ನಾವು ತಿನ್ನುವುದಕ್ಕೆ ಆಗುತ್ತಿಲ್ಲ. ಕಾರಣ ಕೆಲವು ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ವಿಷಪೂರಿತ ಮಾವಿನಿಂದ ಆರೋಗ್ಯ ಕೆಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಮಾವಿನ ಮೇಳ ಗುರುವಾರ ಆರಂಭವಾಗಿದ್ದು, ನಾಲ್ಕು ದಿನಗಳ ಕಾಲ ನಡೆಯಲಿದೆ. ಮಾವಿನ ಮೇಳಕ್ಕೆ ಶಾಲಾ ಮಕ್ಕಳನ್ನ ಕರೆತಂದು ಅವರಿಗೂ ಕೂಡಾ ಮಾವಿನ ಹಣ್ಣಿನ ಉಪಯೋಗವನ್ನ ಪರಿಚಯ ಮಾಡಿಕೊಡಬೇಕೆಂದು ಈಗಾಗಲೇ ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದು, ಇದು ಹಣ್ಣುಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಇನ್ನು ವಿಷಪೂರಿತ ಮಾವಿನ ಹಣ್ಣನ್ನ ಸೇವಿಸುತ್ತಿರುವುದರಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಇಂತಹವುದರ ಮೇಲೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕೆಂದು ಸಂಸದ ಪ್ರಜ್ವಲ್ ರೇವಣ್ಣ ಸೂಚಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರದ ಕಲಾಭವನದಲ್ಲಿ ಮಾವು ಮೇಳ ಆಯೋಜಿಸಲಾಗಿದೆ. ಇಲ್ಲಿ 54 ಜಾತಿಯ ಮಾವು ಮತ್ತು ಹಲಸಿನ ತಳಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಮಾವು ಹಾಗೂ ಹಲಸು ಬೆಳೆಗಾರರ ಆರ್ಥಿಕ ಸ್ಥಿತಿ ಸುಧಾರಣೆ ಹಾಗೂ ನಾಗರಿಕರ ಆರೋಗ್ಯದ ಹಿತದೃಷ್ಟಿಯ ಜೊತೆಗೆ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ 2861 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಅಂದಾಜು 21,547 ಟನ್ಗಳಷ್ಟು ಉತ್ಪಾದನೆಯಾಗುತ್ತಿದೆ.
ಸದ್ಯ ನಗರದಲ್ಲಿ ನಡೆಯುತ್ತಿರುವ ಮಾವು ಮೇಳದಲ್ಲಿ ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೆಂದೂರ, ಮಲಗೋವಾ, ತೋತಾಪುರಿ, ನೀಲಂ, ಆಮ್ರಪಾಲಿ, ಕೇಸರ್, ದಶೇರಿ, ಆಪೋಸ್, ಕಲ್ಮಿ, ಸವಾರಿ, ಸಿಂಧೂರ, ಬೇನಿಶಾ, ಸಿಂಡುಲಾ, ಆಪೋಸ್ ಸೇರಿದಂತೆ ಜವಾರಿ ಹಣ್ಣುಗಳನ್ನು ಖರೀದಿಸಿ ಸವಿಯಬಹುದಾಗಿದೆ.