ಹಾಸನ: ಹತ್ತು ರೂಪಾಯಿ ನೋಟುಗಳನ್ನ ಎಸೆದು ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಚಿಕ್ಕಮೇದೂರು ಗ್ರಾಮದ ಉಮೇಶ್ ಹಣ ಕಳೆದುಕೊಂಡವರು. ಬ್ಯಾಂಕಿನಲ್ಲಿ ಅಡಮಾನ ಇಟ್ಟಿದ್ದ ಒಡವೆಗಳನ್ನು ಬಿಡಿಸಿಕೊಳ್ಳಲು ಜೋಳ ಮಾರಿ ಬಂದ ಹಣವನ್ನು ಬ್ಯಾಂಕಿಗೆ ಕಟ್ಟಲು ಬೇಲೂರು ಪಟ್ಟಣಕ್ಕೆ ಬಂದಿದ್ದರು.
ಹಣ ಕಟ್ಟಲು ಇನ್ನು 10ರೂ. ಕಡಿಮೆ ಬಿದ್ದಿದೆ. ಆ ಹಣವನ್ನ ಎಟಿಎಂನಲ್ಲಿ ತರಲೆಂದು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ದ್ವಿಚಕ್ರ ವಾಹನದಲ್ಲಿ ಬಂದಾಗ, ವಿದ್ಯಾರ್ಥಿಗಳ ಸೋಗಿನಲ್ಲಿ ಬಂದ ಯುವತಿಯೊಬ್ಬಳು ಮತ್ತು ಇಬ್ಬರು ಯುವಕರು ಉಮೇಶ್ ಬೈಕಿನ ಬಳಿ ಹತ್ತು ರೂಪಾಯಿಗಳ ಹತ್ತಾರು ನೋಟುಗಳನ್ನು ಎಸೆದಿದ್ದಾರೆ. ಬಳಿಕ ಅವರ ಗಮನವನ್ನು ಬೇರೆ ಕಡೆ ಸೆಳೆದು ಬೈಕ್ ಟ್ಯಾಂಕ್ ಮೇಲಿದ್ದ ಹಣದ ಬ್ಯಾಗನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ.
ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಂಡ ಪೊಲೀಸರು ಬ್ಯಾಂಕಿನ ಸಿಸಿಟಿವಿ ದೃಶ್ಯಾವಳಿಯನ್ನ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ವಂಚಕರ ತಂಡವನ್ನು ಹಿಡಿಯಲು ಪೊಲೀಸರು 2 ವಿಶೇಷ ತಂಡವನ್ನು ರಚಿಸಿದ್ದಾರೆ.