ಹಾಸನ: ಅಲ್ಲಾ, ಶಿವಲಿಂಗೇಗೌಡರಿಗೆ ಒಂದೇ ಒಂದು ಸಲ ಜೈಕಾರ ಕೂಗಿದ್ರೆ, ನಿಮ್ಮ ಗಂಟು ಹೋಗಿ ಬಿಡುತ್ತಾ? ಎಂದು ಹೇಳುವ ಮೂಲಕ ಶಾಸಕ ಕೆ.ಎಂ. ಶಿವಲಿಂಗೇಗೌಡ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಎದುರೇ ತಮ್ಮ ಅಸಮಾಧಾನ ಹೊರಹಾಕಿದರು. ಜಿಲ್ಲೆಯ ಅರಸೀಕೆರೆ ತಾಲೂಕಿನ ತಿರುಪತಿಹಳ್ಳಿಯಲ್ಲಿ ನಡೆದ ಮುತ್ತುರಾಯಸ್ವಾಮಿ ಜಾತ್ರಾಮಹೋತ್ಸವದ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ತಮ್ಮ ಮುನಿಸನ್ನು ವ್ಯಕ್ತಪಡಿಸಿದರು.
ಇತ್ತೀಚೆಗೆ ಶಾಸಕ ಶಿವಲಿಂಗೇಗೌಡ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇದರ ಬೆನ್ನಲೇ ಈ ಎಲ್ಲ ಬೆಳವಣಿಗೆಗೆ ಪುಷ್ಟಿ ನೀಡುವಂತೆ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಶಿವಲಿಂಗೇಗೌಡ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ, ಕೆಲವರು ಪ್ರಜ್ವಲ್‌ಗೆ ಮಾತ್ರ ಜೈಕಾರ ಹಾಕಿದ್ರು. ಇದರಿಂದ ಸಹಜವಾಗಿ ಕೆ.ಎಂ. ಶಿವಲಿಂಗೇಗೌಡ ಬೇಸರಗೊಂಡರು.
ಇವತ್ತು ಕೆಲವರು, ಎಲ್ಲಿಂದ ಬಂದರು ಎಂಬುದು ನಮಗೆ ಗೊತ್ತಿದೆ. ಬಂದವರು ಪ್ರಜ್ವಲ್ ಅವರಿಗೆ, ಪ್ರಜ್ವಲ್ ಅವರಿಗೆ ಎಂದು ಎಷ್ಟು ಸಲ ಕೂಗಿದ್ರಿ. ಶಿವಲಿಂಗೇಗೌಡರಿಗೆ ಅಂತಾ ಒಂದ್ಸಲ ಹೇಳಿದ್ರೆ ನಿಮ್ಮ ಗಂಟು ಹೋಗಿಬಿಡೋದಾ? ಅವನೊಬ್ಬ ನಾನು ಮಂಚೇನಳ್ಳಿಯಿಂದ ಬಂದಿದ್ದೇನೆ ಎಂದು ಪ್ರಜ್ವಲ್ ಬಳಿ ಹೇಳಿ ಹೋದ. ಮಂಜನಳ್ಳಿಯಿಂದ ಒಬ್ಬ ಹುಡುಗ ಬಂದಿದ್ದಾನೆ. ಶಿವಲಿಂಗೇಗೌಡನಿಗೆ ಜೈ ಅಂದ್ರೆ ನಿನ್ನ ಗಂಟು ಹೋಗ್ಬಿಡುತ್ತಾ? ಎಂದು ಕೋಪಗೊಂಡು ಪ್ರಜ್ವಲ್ ಸಾಹೇಬರೇ ನಿಮ್ಮ ಪಿಎ ಒಬ್ಬ ಇದ್ದಾನೆ. ಬೇಜಾರು ಮಾಡ್ಕೋಬೇಡಿ. ಅವನು ಹತ್ತು ಹುಡುಗರನ್ನು ಕಟ್ಟಿಕೊಂಡು ಎಲ್ಲಿ ಹೋದರೂ ಹೀಗೆ ಕೂಗಿಸುತ್ತಾನೆ ಯಾಕೆ? ಅವತ್ತೊಂದು ದಿನ ಮಂಜನಹಳ್ಳಿಯಲ್ಲಿ ಮುಂದಿನ ಎಂಎಲ್‌ಎ ಗಂಗಾಧರ್ ಅವರಿಗೆ ಅಂದ. ನಾನು ಹೇಳ್ದೆ ಅವನು ನಿಂತುಕೊಳ್ಳೋದಾದ್ರೆ, ಈಗಲೇ ಹೂವಿನಹಾರ ಹಾಕಿ ಬಿಟ್ಟುಕೊಟ್ಟು ಹೋಗ್ತೀನಿ. ಈ ರೀತಿ ಯಾಕೆ ಮಾಡಬೇಕು ಎನ್ನುವ ಮೂಲಕ ಪ್ರಜ್ವಲ್ ಪಿಎ ಅರುಣ್ ಮತ್ತು ಮಂಜನಹಳ್ಳಿ ಯುವಕ ಕುಮಾರ್ ಎಂಬುವರ ಹೆಸರು ಹೇಳದೆ ಸಿಡಿಮಿಡಿಗೊಂಡರು.
ಇದನ್ನೂ ಓದಿ: ಮಗಳಿಗೆ ಅಂತಿಮ ವಿದಾಯ ಹೇಳಿದ ಜಿಟಿಡಿ ಪುತ್ರ: ಅಂತ್ಯಕ್ರಿಯೆ ವೇಳೆ ಆಕ್ರಂದನ
ಇದೇ ವೇಳೆ ಯುವಕರಿಗೆ ಬುದ್ಧಿ ಹೇಳಿದ ಸಂಸದ ಪ್ರಜ್ವಲ್ ರೇವಣ್ಣ, ಎಲ್ಲರೂ ಒಟ್ಟಿಗೆ ಇರಬೇಕು. ನಾನೇ ಶಿವಲಿಂಗಣ್ಣ ಅವರಿಗೆ ಕರೆ ಮಾಡಿ ಕರೆದುಕೊಂಡು ಬಂದಿದ್ದೇನೆ. ನಮ್ಮ ಕಡೆ ಇರಬಹುದು, ಬೇರೆ ಕಡೆಯಿಂದ ಇರಬಹುದು. ಗೊಂದಲ ಸೃಷ್ಟಿ ಮಾಡಬೇಡಿ. ದಯವಿಟ್ಟು ಪಕ್ಷ ಒಡೆಯುವ ಕೆಲಸ ಮಾಡಬೇಡಿ. ರಾಜಕೀಯವನ್ನು ವೇದಿಕೆ ಮೇಲಿರುವ ನಮಗೆ ಬಿಡಿ. ಹುಡುಗರು ಇದನ್ನ ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ರು.