ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಬಗ್ಗೆ ಏನ್ ಮಾತನಾಡಿದರೂ ನನಗೆ ಆಶೀರ್ವಾದ ಇದ್ದ ಹಾಗೆ. ನನ್ನ ಬಗ್ಗೆ ಅವರಿಗೆ ವಿಶೇಷ ಮಮಕಾರವಿದೆ. ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ನನ್ನ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದರೆ ಸದನದಲ್ಲಿ ಸಿಕ್ಕಾಗ ಅಲ್ಲೇ ಮಾತನಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ನಾನೇ ಗೆಲ್ಲುವಾಗ ನಾನೇಕೆ ಎಲ್ಲರನ್ನು ದೂಷಿಸಲಿ ಎಂದು ಹಾಸನ ಶಾಸಕ ಪ್ರೀತಂ ಜೆ.ಗೌಡ ಹೇಳಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿರೋರು. ನಾನು ಒಂದು ಬಾರಿ ಗೆದ್ದಿರೋ ಸಾಮಾನ್ಯ ಶಾಸಕ. ಹಾಗಾಗಿ ಕುಮಾರಣ್ಣನ ಮಾತುಗಳನ್ನು ನಾನು ಸ್ವೀಕರಿಸುತ್ತೇನೆ. ಅವರು ಏನು ಸಲಹೆ ಕೊಟ್ಟರೂ ಸ್ವೀಕರಿಸುವೆ ಎಂದರು.
ಜೆಡಿಎಸ್ ಪಕ್ಷದಲ್ಲಿ ರಾಜ್ಯಾಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದು, ಸ್ವಾಭಾವಿಕವಾಗಿ ಸ್ಥಳೀಯರು ಹೇಳಿದ್ದನ್ನು ಉಲ್ಲೇಖ ಮಾಡಿರುತ್ತಾರೆ. ಅದು ಕಾರ್ಯಕರ್ತರನ್ನು ಹುರಿದುಂಬಿಸಲು ಹೇಳಿದ್ದು. ಅದನ್ನು ತಪ್ಪು ಎನ್ನಲಾರೆ. 2023ಕ್ಕೆ ಅಗ್ನಿಪರೀಕ್ಷೆ ನಡೆಯಲಿದ್ದು, ಅಲ್ಲಿ ಫಲಿತಾಂಶ ಹೊರ ಬರುತ್ತದೆ ಎಂದು ಹೇಳಿದರು.
ಕಟ್ಟಡ, ಲೇಔಟ್, ಯುಜಿಡಿ, ರಸ್ತೆ ಮಾಡುವುದು ಅಭಿವೃದ್ಧಿ. ಅವರೊಂತರ ಅಭಿವೃದ್ಧಿ ಮಾಡಿದ್ದಾರೆ. ನಾನೊಂತರಾ ಅಭಿವೃದ್ಧಿ ಮಾಡಿದ್ದೇನೆ. ಅವರು ಅಭಿವೃದ್ಧಿ ಮಾಡಿರುವುದನ್ನು ಜನ ಒಪ್ಪಿದ್ದರೆ ಅವರಿಗೆ ಮತ ನೀಡುತ್ತಾರೆ. ನಾನು ಅಭಿವೃದ್ಧಿ ಮಾಡಿರುವುದನ್ನು ಒಪ್ಪಿದ್ದರೆ ಮತದಾರರು ನನಗೆ ವೋಟ್ ಹಾಕುತ್ತಾರೆ. ಚುನಾವಣೆ ಎಂದ ಮೇಲೆ ಪ್ರೀತಂ ಗೌಡನನ್ನ ಅವಿರೋಧವಾಗಿ ಆಯ್ಕೆ ಮಾಡುವುದಿಲ್ಲ. ಕಾಂಗ್ರೆಸ್ನಿಂದಲೂ ಒಬ್ಬರು ಅಭ್ಯರ್ಥಿ ಇರುತ್ತಾರೆ. ಜೆಡಿಎಸ್ನಿಂದಲೂ ಒಬ್ಬರು ಇರುತ್ತಾರೆ. ಅವರ ತಯಾರಿ ಅವರು ಮಾಡಿಕೊಳ್ಳಬೇಕು. ನಮ್ಮ ತಯಾರಿ ನಾವೂ ಮಾಡಿಕೊಳ್ಳಬೇಕು ಅಷ್ಟೇ ಎಂದು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ನವರು ಸಮಾವೇಶ ಮಾಡ್ತಾರೆ, ನಾವೂ ಸಮಾವೇಶ ಮಾಡ್ತೇವೆ. ಎಲ್ಲರೂ ಮಾಡೋದು ಜನಸೇವೆ ಮಾಡಲು. ಜನರು ಸೇವೆ ಮಾಡೋದಕ್ಕೆ ಅವಕಾಶ ಕೊಟ್ಟ ಸಂದರ್ಭದಲ್ಲಿ ಕಳೆದ 25 ವರ್ಷದಲ್ಲಿ ಏನ್ ಮಾಡಿದ್ದಾರೆ ಅಂತಾ ಜನ ನೋಡಿದ್ದಾರೆ. ಈಗ 5 ವರ್ಷದಲ್ಲಿ ಪ್ರೀತಂ ಗೌಡ ಏನು ಸೇವೆ ಮಾಡಿದ್ದಾನೆ ಅಂತನೂ ನೋಡ್ತಾರೆ ಎಂದರು.
ಇದನ್ನೂ ಓದಿ: ಒಬ್ಬ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ: ಪ್ರೀತಂಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ