ಹಾಸನ: ಇವತ್ತು ಚುನಾವಣೆ ನಿಗದಿ ಮಾಡಿ ನಾಳೆ ಮಾಡ್ತೇವೆ, ನಾಡಿದ್ದು ಮಾಡ್ತೇವೆ ಅಂದ್ರೆ ಇದೇನು ಕುಂಟೆಬಿಲ್ಲೆ ಆಟನಾ? ನಾನು ಈ ಬಗ್ಗೆ ಈಗಲೇ ಕೋರ್ಟ್‌ಗೆ ಹೋಗುತ್ತೇನೆ ಎಂದು ಶಾಸಕ ಪ್ರೀತಂ ಜೆ. ಗೌಡ ಆಕ್ರೋಶ ಹೊರಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲೇ ಹೇಳಿದ ಹಾಗೆ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯರೇ ಆಗುತ್ತಿದ್ದಾರೆ. ಗುರುವಾರ ನಡೆದ ನಗರಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಎರಡು ಸ್ಥಾನಕ್ಕೂ ನಮ್ಮವರೆ ನಾಮಪತ್ರ ಸಲ್ಲಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹೆಸರು ಅಧಿಕೃತವಾಗಿ ಘೋಷಣೆಯಾಗುವುದು ಒಂದೆ ಬಾಕಿಯಿದೆ ಎಂದರು.
ಉಪಾಧ್ಯಕ್ಷ ಚುನಾವಣೆಯಲ್ಲಿ ಸದಸ್ಯರು ಒಂದು ರೀತಿಯ ಗೊಂದಲವನ್ನು ಮಾಡಿಕೊಂಡ ವಿವಿಧ ಕಾರಣಗಳಿಂದ ಚುನಾವಣಾಧಿಕಾರಿಗಳು ಚುನಾವಣೆ ಮುಂದೂಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಯಾವ ರೀತಿ ಚುನಾವಣೆ ಮಾಡುತ್ತಾರೆ ಕಾದು ನೋಡಬೇಕಾಗಿದೆ ಎಂದರು.
ಕಾನೂನು ಪ್ರಕಾರ ಚುನಾವಣೆ ಮಾಡಿದ್ದರೆ ಬಿಜೆಪಿ ಅಭ್ಯರ್ಥಿ ಒಬ್ಬರನ್ನೇ ಆಯ್ಕೆ ಮಾಡಬೇಕಾಗಿತ್ತು. ಚುನಾವಣಾಧಿಕಾರಿಗಳು ಕಾನೂನು ವಿರುದ್ಧವಾಗಿ ಕೆಲಸ ಮಾಡಿರುವುದರಿಂದ ಇದರ ವಿರುದ್ಧ ನಾವು ಕೋರ್ಟಿಗೆ ಹೋಗುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಳಿಗ್ಗೆ 11 ಗಂಟೆ ಒಳಗೆ ನಾಮಪತ್ರ ಸಲ್ಲಿಸಲಾಗಿತ್ತು. ಕಳೆದ 6 ದಿನಗಳಿಂದ ಸಮಯವಕಾಶವಿತ್ತು. ಯಾರು ನಾಮಪತ್ರ ಸಲ್ಲಿಸಲಿಲ್ಲ. ನಾನು ಎಂದೂ ಭವಿಷ್ಯ ಹೇಳುವುದಿಲ್ಲ. ಅಂದು ಹೇಳಿದಂತೆ ಬಿಜೆಪಿ ಅಭ್ಯರ್ಥಿಯೇ ಉಪಾಧ್ಯಕ್ಷರಾಗುವುದು ನಿಶ್ಚಿತ. ಜೆಡಿಎಸ್ ಪಕ್ಷದಿಂದ ಯಾರು ನಾಮಪತ್ರ ಸಲ್ಲಿಸುವುದಿಲ್ಲ ಎಂದು ಮೊದಲೆ ಹೇಳಿರುವುದಾಗಿ ತಿಳಿಸಿದರು.
ಯಾರು ನಾಮಪತ್ರ ಸಲ್ಲಿಸಿದ್ದಾರೆ ಅವರಿಗೆ ಮಾತ್ರ ಚುನಾವಣೆಗೆ ಅವಕಾಶ ಮಾಡಿಕೊಡಬೇಕು. ಅವರ ಮನವಿ ತಿರಸ್ಕರಿಸಬೇಕು. ಈ ಬಗ್ಗೆ ಕೋರ್ಟ್ ತೀರ್ಪು ನಮ್ಮ ಪರ ಬರುವ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದರು.
ಮೀಸಲಾತಿ ಕಾನೂನು ಬಾಹಿರ ಎಂದು ಜೆಡಿಎಸ್ ಈಗಾಗಲೇ ಸುಪ್ರೀಂ ಕೊರ್ಟ್ ಮೊರೆ ಹೋಗಿದೆ. ಸುಪ್ರೀಂ ಕೋರ್ಟ್ ಇಂದು ಚುನಾವಣೆ ನಡೆದರೂ ಫಲಿತಾಂಶ ಪ್ರಕಟಿಸದಂತೆ ಸೂಚನೆ ನೀಡಿದೆ. ಈ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸಿ ಅಂತಿಮ ತೀರ್ಪು ಬಂದ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಪ್ರಕಟಿಸುವಂತೆ ತಿಳಿಸಿದೆ.