ಹಾಸನ: ತನ್ನ ಆತ್ಮ ರಕ್ಷಣೆ ಮತ್ತು ಕುಟುಂಬ ರಕ್ಷಣೆಗಾಗಿ ಚಿರತೆಯನ್ನು ಸಾಯಿಸಿರುವ ಕಿರಣ್ ಮತ್ತು ರಾಜಗೋಪಾಲ್ ಇಬ್ಬರಿಗೂ ಶೌರ್ಯ ಪ್ರಶಸ್ತಿ ಕೊಡಬೇಕು ಎಂದು ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಆಗ್ರಹಿಸಿದ್ದಾರೆ.
ಹಾಸನದ ಪ್ರವಾಸಿ ಮಂದಿರಲ್ಲಿ ಮಾತನಾಡಿದ ಅವರು, ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತಿರೋದು ಹಸಿವಿನಿಂದ. ಹೀಗಾಗಿ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡ್ತಿವೆ. ಇಲಾಖೆ ಕಾಡಿನಲ್ಲೇ ಚೆಕ್ ಡ್ಯಾಂ ನಿರ್ಮಿಸಿ ನೀರು ಒದಗಿಸಬೇಕು. 4 ದಿನದ ಹಿಂದೆ ನಡೆದ ಘಟನೆಯಿಂದ ಅರಸೀಕೆರೆ ಜನತೆ ಬೆಚ್ಚಿ ಬಿದ್ದಿದ್ದಾರೆ. ಆತ ತನ್ನ ಮತ್ತು ತಮ್ಮ ಕುಟುಂಬದ ರಕ್ಷಣೆಗಾಗಿ ಚಿರತೆ ಜೊತೆಗೆ ಹೋರಾಟ ಮಾಡಿ ಕೊಂದಿದ್ದು ನಿಜಕ್ಕೂ ಸಾಹಸವೇ ಸರಿ ಎಂದರು.
ಅರಸೀಕೆರೆ ತಾಲೂಕಿನ ಬೆಂಡೆಕೆರೆಯಲ್ಲಿ ಒಬ್ಬ ತನ್ನ ತಾಯಿಗಾಗಿ ಮತ್ತೊಬ್ಬ ತನ್ನ ಮಡದಿ, ಮಕ್ಕಳಿಗಾಗಿ ಚಿರತೆಯೊಂದಿಗೆ ಹೋರಾಟ ಮಾಡಿದ್ದಾರೆ. ಚಿರತೆ ಜತೆ ಕಾದಾಡಿದ ಇಬ್ಬರಿಗೂ ಶೌರ್ಯ ಪ್ರಶಸ್ತಿ ನೀಡಬೇಕು. ಪ್ರಶಸ್ತಿ ನೀಡಬೇಕೆಂದು ಸಾರ್ವಜನಿಕರೇ ಒತ್ತಾಯ ಮಾಡ್ತಿದ್ದಾರೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಬೇಕು. ಸರ್ಕಾರ ಅವರಿಗೆ ಶೌರ್ಯಪ್ರಶಸ್ತಿ ನೀಡಬೇಕು. ಕಿರಣ್ ಹಾಗೂ ರಾಜಾಗೋಪಾಲ್ ನಾಯ್ಕ್ ಇಬ್ಬರಿಗೂ ಶೌರ್ಯ ಪ್ರಶಸ್ತಿ ನೀಡಬೇಕು. ಇಲ್ಲವಾದರೆ ನಮ್ಮ ಅರಸೀಕೆರೆಯಿಂದ ನಾವೇ ಕೊಡುತ್ತೇವೆ ಎಂದರು.
ಚಿರತೆ ಸಾಯಿಸಿರುವುದರಿಂದ ಪೊಲೀಸರು ಬಂಧಿಸುತ್ತಾರೆ ಎಂದು ಕುಟುಂಬದವರು ಭಯಗೊಂಡಿದ್ದರು. ಆದರೆ, ಆತ್ಮರಕ್ಷಣೆಗಾಗಿ ಕೊಂದಿರುವುದರಿಂದ ಯಾರನ್ನು ಬಂಧಿಸುವುದಿಲ್ಲ ಎಂದು ಧೈರ್ಯ ಹೇಳಿದ್ದೇನೆ ಎಂದ ಅವರು ನಂತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಆರೋಗ್ಯ ವಿಚಾರಿಸಿದ್ರು.
ಓದಿ:ಆತ್ಮರಕ್ಷಣೆಗಾಗಿ ಚಿರತೆ ಕೊಂದಿದ್ದ ರಾಜ ಗೋಪಾಲ: ಆಧುನಿಕ ಹೊಯ್ಸಳ ಬಿರುದು
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಕೂಡ ಚಿರತೆ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಕಿರಣ್ ಮತ್ತು ರಾಜಗೋಪಾಲ್ ಶೌರ್ಯ ಮೆಚ್ಚಿ ಇಬ್ಬರಿಗೂ ತಲಾ 25 ಸಾವಿರದಂತೆ ಒಟ್ಟು 50 ಸಾವಿರವನ್ನು ವೈಯಕ್ತಿಕವಾಗಿ ನೀಡಿದ್ರು. ಇನ್ನು ಗಾಯಾಳುಗಳಿಗೆ ಸರ್ಕಾರದ ವತಿಯಿಂದಲೇ ಪೂರ್ಣ ಚಿಕಿತ್ಸೆಯ ವೆಚ್ಚ ಭರಿಸಲಿದ್ದು, ಕಾಡು ಪ್ರಾಣಿಗಳ ಹಾವಳಿಗೆ ಬಜೆಟ್ ಸಮಯದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಫೆ.22ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ ಆಧುನಿಕ ಹೊಯ್ಸಳ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟ ಮಾಡಿತ್ತು. ಅದ್ರಂತೆ ಚಿರತೆ ಕೊಂದ ವೀರರಿಗೆ ಸರ್ಕಾರವೇ ಶೌರ್ಯ ಪ್ರಶಸ್ತಿ ನೀಡಲು ಮುಂದಾಗಿದ್ದು, ಇನ್ನು ಕಾಂಗ್ರೆಸ್ ಪಕ್ಷದ ಡಿ.ಕೆ. ಶಿವಕುಮಾರ್ ಕೂಡ ಆಧುನಿಕ ಹೊಯ್ಸಳ ಎಂಬ ಬಿರುದು ನೀಡಿ, 25 ಸಾವಿರ ಘೋಷಣೆ ಮಾಡಿದ್ರು. ಇದ್ರ ಬೆನ್ನಲ್ಲಿಯೇ ಜೆಡಿಎಸ್ ಪಕ್ಷದಿಂದ 50 ಸಾವಿರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಕೂಡ ಇಬ್ಬರಿಗೂ ಸೇರಿ 50 ಸಾವಿರ ರೂ.ನೀಡಿದ್ದಾರೆ. ಇದು ಈಟಿವಿ ಫಲ ಶೃತಿ ಎಂದರೆ ತಪ್ಪಾಗಲ್ಲ.